
ಬ್ಲಾಗಗಳಲ್ಲಿ ಅವರು ಆಸಕ್ತಿದಾಯಕ ಮತ್ತು ಮಾಹಿತಿಪೂರ್ಣ ಲೇಖನ ಬರೆಯುತ್ತಾರೆ. ಆದರೂ ಈ ಬಗ್ಗೆ ಹೆಚ್ಚಾಗಿ ಬೇರೆಯವರಿಗೆ ಹೇಳಿಕೊಳ್ಳುವುದಿಲ್ಲ. ಪತ್ತಾರ ಅವರು ಯಾವಾಗಲೂ ಏನಾದರೊಂದು ಮಾಡುತ್ತಿರುತ್ತಾರೆ. ಆದರೆ ಮಾಡಿಯೂ ಮಾಡದಂತೆ ಇರುತ್ತಾರೆ. ಬೀದರ ಇತಿಹಾಸ, ಪರಂಪರೆ ಬಗ್ಗೆ ಮಹಮ್ಮದ್ ಗವಾನನ ಬಗ್ಗೆ ಅವರು ಹೆಕ್ಕಿ ತೆಗೆದಷ್ಟು ಇದುವರೆಗೂ ಯಾರೂ ಆ ಕಾರ್ಯ ಮಾಡಿಲ್ಲ. ಅವರ `ಕ್ಯಾಮೆರಾ ಎಂಜಿನಿಯರ್ ಗುಲಾಂ ಮುಂತಾಕಾ' ಕೃತಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟವಾಗಿದೆ. ಬೆಂಗಳೂರು ಕ್ರೈಸ್ಟ್ ಯುನಿವರ್ಸಿಟಿಯವರು `ಈಗ ಹೀಗಿರುವ ಲೋಕದಲ್ಲಿ' ಪುಸ್ತಕ ಪ್ರಕಟಿಸಿದ್ದಾರೆ. `ಮಹಾದೇವಬಾಬಾ ಮೆಡೋಸ್ ಟೇಲರ್' ಕೃತಿಯನ್ನು ಪತ್ತಾರರು ಸಂಪಾದಿಸಿದ್ದಾರೆ.

ಪತ್ತಾರ ಅವರಿಗೆ ಒಂದು ಬ್ಲಾಗ್ ನಿಂದ ಏನು ಲಾಭ ಆಗಿದೆಯೋ ಅವರು ಇನ್ನೊಂದು ಬ್ಲಾಗ್ (ಚಹರೆ) ಆರಂಭಿಸುತ್ತೇನೆ ಎಂದು ಹೇಳಿದ್ದಾರೆ ಎಂದು ಅವಧಿಯಲ್ಲಿ ಬರೆಯಲಾಗಿದೆ. ನನಗೂ ಬ್ಲಾಗ್ ಆರಂಭಿಸುವಾಗ ಈ ಪ್ರಶ್ನೆ ಕಾಡಿದೆ. ಆದರೂ ಲಾಭ ಹಾನಿಯ ಲೆಕ್ಕ ಹಾಕದೆ 'ಭೂಮಂಡಲ' ಆರಂಭಿಸುತ್ತಿದ್ದೇನೆ. ( ಅಸಲಿಗೆ ಬ್ಲಾಗ್ ನಿಂದ ಲಾಭ ಹೇಗೆ ಹಾನಿ ಹೇಗೆ ಎಂಬುದು ನನಗೆ ತಿಳಿದಿಲ್ಲ.) ಬ್ಲಾಗ್ ರಚಿಸುವಾಗ ನನಗೆ ಬೇಕಾಗಿದ್ದ ಯಾವುದೇ ಹೆಸರು ಸ್ವೀಕೃತ ಆಗಲಿಲ್ಲ.
ಆದ್ದರಿಂದ BHURE ಮತ್ತು MANIK ಈ ಹೆಸರುಗಳಿಂದ ಪ್ರಥಮ ಮೂರು ಅಕ್ಷರಗಳನ್ನು ತೆಗೆದುಕೊಂಡು ( BHU+ MAN) ಪ್ರಯತ್ನಿಸಿದೆ. ಅದು (BHUMANDAL) ಭೂಮಂಡಲ ಆಗಿದೆ.
ನನ್ನ ಬ್ಲಾಗ್ ನ್ನು ಪ್ರಥಮವಾಗಿ ವೀಕ್ಷಿಸಿರುವ ಬಸವಕಲ್ಯಾಣ ಎಂಜಿನಿಯರಿಂಗ್ ಕಾಲೇಜಿನ ಅಧೀಕ್ಷಕರಾದ ಪ್ರೇಮಸಾಗರ ಪಾಟೀಲ ಅವರು ಸರಿಯಾದ ಹೆಸರು ಇಟ್ಟಿದ್ದೀರಿ ಎಂದರು. ಇವರ ಬಗ್ಗೆ ಏಕೆ ಪ್ರಸ್ತಾಪಿಸುತ್ತಿದ್ದೇನೆ ಎಂದರೆ ಪ್ರತಿವಾರ ಇಲ್ಲಿ ನಡೆಯುವ ಮುಕ್ತ ಸಂವಾದ ಸಭೆಯಲ್ಲಿ ಇವರೂ ಭಾಗವಹಿಸುತ್ತಾರೆ. 13 ನೇ ಸಭೆಯಲ್ಲಿ ಬ್ಲಾಗ್ ನಲ್ಲಿ ದೊರೆಯುವ ಮಾಹಿತಿ ಬಗ್ಗೆ ನನಗೆ ತಿಳಿದಷ್ಟನ್ನು ವಿವರಿಸಿದ್ದೇ. ಕೆಂಡ ಸಂಪಿಗೆಯ ಹೊಸ ತಲೆಮಾರಿನ ಲೇಖಕರ ಅಂಕಣದಲ್ಲಿ ಈ ಭಾಗದವರಾದ ಮಹಾಂತೇಶ ನವಲಕಲ್, ವಿಕ್ರಮ ವಿಸಾಜಿ, ದೇವು ಪತ್ತಾರ, ಚಿದಾನಂದ ಸಾಲಿ, ಕಲಿಗಣನಾಥ ಗುಡದೂರ, ಅರುಣ ಜೋಳದಕೂಡ್ಲಿಗಿ, ಪೀರಬಾಷಾ ಬಳ್ಳಾರಿ ಅವರ ಬಗ್ಗೆ ಬಂದಿದೆ ಎಂದು ಹೇಳಿದಕ್ಕೆ ಪ್ರೇಮಸಾಗರ ಪಾಟೀಲ ಅವರು ಮರುದಿನ ಬೆಳಿಗ್ಗೆಯೇ ಕಂಪ್ಯೂಟರ್ ಎದುರಿಗೆ ಕುಳಿತುಕೊಂಡು ಇದೆಲ್ಲವನ್ನು ನೋಡಿದ್ದಾರೆ. ಕೆಂಡಸಂಪಿಗೆಯಲ್ಲಿನ ಉದ್ಯಮಿ ಅಶೋಕ ಖೇಣಿ ಅವರ ಮನೆತನದ `ಏನಕೇನ್ ಖೇಣಿ ಪುರಾಣ' ವೀಕ್ಷಿಸಿದ್ದೇನೆ. ಬ್ಲಾಗನಲ್ಲಿ ಎಲ್ಲ ವಿಷಯಗಳ ಮಾಹಿತಿ ಇದೆ ಎಂದು ಫೋನ ಮಾಡಿ ಪ್ರತಿಕ್ರಿಯಿಸಿದರು.
ಮುಕ್ತ ಸಂವಾದದ ಬಗ್ಗೆ ಹೇಳಬೇಕೆಂದರೆ ಪ್ರತಿವಾರ ಕೆಲವರು ಕೆಲಕಾಲ ಒಂದೆಡೆ ಕುಳಿತು ವಿವಿಧ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದು ಈ ಸಭೆಗೆ ಈ ಹೆಸರು ಇಡಲಾಗಿದೆ. ಇದುವರೆಗೆ 13 ಸಭೆಗಳು ನಡೆದಿದ್ದು 11 ನೇ ಸಭೆಯಲ್ಲಿ ಹುಮನಾಬಾದನ ಸಾಕ್ಷಿ ಪ್ರತಿಷ್ಠಾನದಿಂದ ಬಿಡುಗಡೆ ಆಗಿರುವ 11 ಪುಸ್ತಕ್ ಗಳಲ್ಲಿ ವೀರಣ್ಣ ಮಂಠಾಳಕರ್ ಅವರ 'ಗಾಂಧಿ ಆಗ್ಬೇಕಂದುಕೊಂಡಾಗ' ವೀರಶೆಟ್ಟಿ ಪಾಟೀಲ ಅವರ 'ಓ ನನ್ನ ಕನ್ನಡ' ವಿಶ್ವನಾಥ ಮುಕ್ತಾ ಅವರ `ಮೌನರಾಗ' ಮಲ್ಲಿಕಾರ್ಜುನ್ ಕಾಡಾದಿ ಅವರ `ನಿಸರ್ಗ' ಕವನ ಸಂಕಲನಗಳ ಬಗ್ಗೆಯೂ ಚರ್ಚಿಸಲಾಯಿತು. ಈಚೆಗೆ ನ್ಯೂಜೆರ್ಸಿಯಲ್ಲಿ ನಡೆದ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪ್ರಕಟ ಆಗಿರುವ `ದೀಪ ತೋರಿದೆಡೆಗೆ' ಕಥಾ ಸಂಕಲನದಲ್ಲಿ ಮುಡಬಿಯಂತಹ ಗ್ರಾಮೀಣ ಭಾಗದವರಾದ ಮಚೇಂದ್ರ ಅಣಕಲ್ ಅವರ `ಡಾಂಬಾರು ದಂಧೆ' ಕಥೆ ಪ್ರಕಟ ಆಗಿದೆ. ಈ ಬಗ್ಗೆಯೂ ಮುಕ್ತ ಸಂವಾದದಲ್ಲಿ ಹೆಮ್ಮೆಯಿಂದ ಚರ್ಚಿಸಿ ಮಚೇಂದ್ರ ಅವರಿಗೆ ಅಭಿನಂದನೆ ಹೇಳಲಾಯಿತು.
.................................................
ನಿನ್ನ ನೀ ಮರೆತಿರುವುದು
ಯಾರು ಯಾರೆಂದು ಗುರುತಿಸಿ ಗುರಿ ತಲುಪುವಂತೆ ಮಾಡಿದೆ.
ಅವರು ಗರಿಬಿಚ್ಚಿರುವಾಗ ನಿನ್ನ ನೀ ಮರೆತಿರುವುದು ನಿನ್ನದೇ ತಪ್ಪು.
ನೀನು ನೀನೇ, ನಿನ್ನಂತೆ ಪರರಿಲ್ಲ ಎಂದು ಲೋಕ ಹೇಳುತ್ತಿದೆ
ನಾನು ಯಾರೆಂಬುದರ ಪರಿವೆ ನಿನಗಿಲ್ಲದಿರುವುದು ನಿನ್ನದೇ ತಪ್ಪು.
ನಿನ್ನ ಕತ್ರುತ್ವ : ಕರ್ತವ್ಯ ಪಾಲನೆಯಿಂದ ಎಲ್ಲೆಡೆ ಕೀರ್ತಿ ವ್ಯಾಪಿಸಿತು
ಯಾರಿಂದಲೋ ಕಿಮ್ಮತ್ತು ದೊರೆತಿದೆ ಎಂದು ಭಾವಿಸುವುದು ನಿನ್ನದೇ ತಪ್ಪು.
ಯಾರಿಗೂ ಕೈಯೊಡ್ಡದೆ ಕಾಡದೆ ನಿನ್ನ ನೀನೇ ಬೆಳೆದೆ
ಸಾಧನೆಯ ಹಾದಿಯಲ್ಲಿನ ಕಷ್ಟ-ನಷ್ಟ ನೆನಪಿಟ್ಟುಕೊಳ್ಳದಿರುವುದು ನಿನ್ನದೇ ತಪ್ಪು.
ನ್ಯಾಯ ಅನ್ಯಾಯವ ತಕ್ಕಡಿಯಲ್ಲಿ ತೂಗಿ ನಿನ್ನದೇ ನೀತಿ ರೂಪಿಸಿದೆ
ಬೇರೆಯವರು ಹಾಕಿದ ಲಕ್ಷಣರೇಖೆ ದಾಟದಿರುವುದು ನಿನ್ನದೇ ತಪ್ಪು.
ಅಸಲಿ, ನಕಲಿ ಯಾವುದೆಂಬುದು ನಿನ್ನಬಿಟ್ಟು ಖಾತ್ರಿಪಡಿಸುವವರಿಲ್ಲ
ನಿನ್ನ ಅಸಲಿಯತ್ತನ್ನು ಪರೀಕ್ಷಿಸಿಕೊಳ್ಳುತ್ತಿರುವುದು ನಿನ್ನದೇ ತಪ್ಪು.
-ಮಾಣಿಕ ಆರ್.ಭುರೆ
1 ಕಾಮೆಂಟ್:
ನಿಮ್ಮ ಭೂಮಂಡಲ ಬ್ಲಾಗ್ ನೋಡಿದವರಿಗೆ ಒಂದು ಕ್ಷಣ ಆಶ್ಚಯ೯ ಹಾಗೂ ವಿಸ್ಮಯಗಳೊಂದಿಗೆ ತೆರೆದುಕೊಳ್ಳುವ ಪುಟಗಳಲ್ಲಿ, ಎಲೆಮರೆ ಕಾಯಾಗಿ ಉಳಿದವರನ್ನು ಬೆಳಕಿಗೆ ತರುವ ಪ್ರಯತ್ನ, ಹೊಸ ವಿಷಯ, ಹೊಸ ಆಲೋಚನೆಗಳೊಂದಿಗೆ ವಿನೂತನವಾದ ವಿಶಿಷ್ಠ ಪ್ರತಿಭೆಗಳನ್ನು ಗುರುತಿಸುವ ನಿಮ್ಮ ಬಹುಮುಖ ಪ್ರತಿಭೆ ಯಾರಿಗೂ ಗೊತ್ತಿಲ್ಲ. ನೀವು ಬರೀ ಪತ್ರಕತ೯ರಾಗಿದ್ದಿರೆಂಬ ಕಲ್ಪನೆ ಹಲವರಲ್ಲಿ ಇದ್ದಂತೆ, ನಿಮ್ಮೊಳಗೊಬ್ಬ ಸಾಹಿತಿ, ಮುಖಪುಟ ರಚನೆಯ ಕಲಾವಿದನ ಗುಣಗಳು ಎಂಧವರನ್ನು ಕೂಡ ಮಂತ್ರ ಮುಗ್ಧರನ್ನಾಗಿಸುತ್ತದೆ. ಆದರೆ ವಾಸ್ತವಿಕ ಬದುಕಿನಲ್ಲಿ ಕಲೆಗೆ ಬೆಲೆ ಇಲ್ಲ ಎನ್ನುವ ರೀತಿ ಭಾಷಣ ಬಿಗಿಯುವ ರಾಜಕಾರಣಿಗಳಿಗೆ, ಕಳಪೆ ಮಟ್ಟದ ಸಾಹಿತಿ, ಪತ್ರಕತ೯ರಿಗೆ ನೀವು ಮಾದರಿಯಾಗಿದ್ದಿರಿ. ನಿಮ್ಮ ಪ್ರಯತ್ನ ನಿರಂತರ ಯಾವತ್ತಿಗೂ ಶಾಶ್ವತವಾಗಿದೆ.
-ವೀರಣ್ಣ ಮಂಠಾಳಕರ್
ಕಾಮೆಂಟ್ ಪೋಸ್ಟ್ ಮಾಡಿ