ಶನಿವಾರ, ಜುಲೈ 23, 2011

'ಪತ್ರಕರ್ತರ ಬಳಗದ' 20 ವರ್ಷಗಳು ಮತ್ತು `ದೇವು ಪತ್ತಾರ' ಅವರಿಗೆ ಪ್ರಶಸ್ತಿ'


     ಜುಲೈ 1 ರಂದು `ಕರ್ನಾಟಕ ಪತ್ರಿಕಾ ದಿನ'ವನ್ನಾಗಿ ಆಚರಿಸಲಾಗುತ್ತದೆ. ನವೆಂಬರ್ 16 ರಂದು `ರಾಷ್ಟ್ರೀಯ ಪತ್ರಿಕಾ
ದಿನ' ಮತ್ತು ಮೇ 6 ರಂದು `ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ'ವನ್ನಾಗಿಯೂ ಆಚರಿಸಲಾಗುತ್ತದೆ. ನಮ್ಮ ಭಾಗದಲ್ಲಿ ಜುಲೈ 1ರ ಪತ್ರಿಕಾ ದಿನಕ್ಕೆ ಬಹಳಷ್ಟು ಮಹತ್ವವಿದೆ. ಈ ನಿಮಿತ್ತವಾಗಿ ರಾಜ್ಯಾದ್ಯಂತ ಪತ್ರಕರ್ತರ ಸಂಘ, ಸಂಸ್ಥೆಗಳಿಂದ ಕಾರ್ಯಕ್ರಮಗಳು ನಡೆಯುತ್ತವೆ. ಅದರಂತೆ ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿಯೂ ಮೊದಲಿನಿಂದಲೂ   ಕಾರ್ಯಕ್ರಮ ಹಮ್ಮಿಕೊಳ್ಳುತ್ತ ಬರಲಾಗಿದೆ. ಆದರೆ ಕಳೆದ ಮೂರು ವರ್ಷಗಳಿಂದ 5 ಸಾವಿರ ರೂಪಾಯಿ ನಗದು ಒಳಗೊಂಡ `ಶಂಕರ ಪ್ರಸಾದ ದುಬೆ ವಿಭಾಗ ಮಟ್ಟದ ಉತ್ತಮ ಪತ್ರಕರ್ತರ ಪ್ರಶಸ್ತಿ' ಒಳಗೊಂಡು ಐದು ಪ್ರಶಸ್ತಿಗಳನ್ನು ಕೊಡುತ್ತಿರುವ ಕಾರಣ ಸಮಾರಂಭಕ್ಕೆ ಹೆಚ್ಚಿನ ಮಹತ್ವ ಪ್ರಾಪ್ತವಾಗಿದೆ.
     6 ನೇ ಜುಲೈ 2011 ರಂದು ಸಮಾರಂಭ ಹಮ್ಮಿಕೊಂಡು ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಶೇಷವೆಂದರೆ ಇಲ್ಲಿನ ಪತ್ರಕರ್ತರ ಬಳಗ 1991 ರಲ್ಲಿ `ಭಾರತ ಕರ್ನಾಟಕ' ವಾಚನಾಲಯ ಆರಂಭಿಸುವ ಮೂಲಕ ತಮ್ಮ ಕಾರ್ಯಚಟುವಟಿಕೆಗಳಿಗೆ ನಾಂದಿ ಹಾಡಿತು ಎನ್ನಬಹುದು. ವಾಚನಾಲಯ ಸ್ಥಾಪಿಸಿ ಇಂದಿಗೆ 20 ವರ್ಷಗಳಾಗುತ್ತಿವೆ. ವಾಚನಾಲಯ ಎರಡು ವರ್ಷ ರಥ ಮೈದಾನದ ಹತ್ತಿರದಲ್ಲಿನ ಕಂಬಳಿ ಮಠದಲ್ಲಿ ಮತ್ತು ಎರಡು ವರ್ಷ ಆರ್ಯ ಸಮಾಜ ಭವನದಲ್ಲಿ ನಡೆದು ನಂತರ ಮುಚ್ಚಲ್ಪಟ್ಟಿತು. ಆದರೆ ಈ ವಾಚನಾಲಯ ಸ್ಥಾಪನೆಯ ಉದ್ದೇಶದಿಂದ ಇಲ್ಲಿನ ಪತ್ರಕರ್ತರೆಲ್ಲರೂ ಒಗ್ಗೂಡಿದರು. ಅಲ್ಲದೆ ಈ ವಾಚನಾಲಯವೇ ನಾನು (ಮಾಣಿಕ ಭುರೆ) ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಕಾರಣವಾಯಿತು ಎಂಬುದನ್ನು  ಹೇಗೆ ಮರೆಯಲಾದೀತು?
ಆಗ ಪಿಯುಸಿ ಓದುತ್ತಿದ್ದ ನಾನು ಬರೆಯುವ ಹವ್ಯಾಸ ಬೆಳೆಸಿಕೊಂಡಿದ್ದೆ. ಕೆಲ ಪತ್ರಿಕೆಗಳಲ್ಲಿ ಆಗಲೇ ನನ್ನ ಕವನ, ಲೇಖನಗಳು ಪ್ರಕಟ ಆಗಿದ್ದವು. ಹೀಗಾಗಿ ಇಲ್ಲಿನ ಪತ್ರಕರ್ತರ ಸಾಮೀಪ್ಯಕ್ಕೆ ಬಂದಿದ್ದೆ. ಪ್ರತಿದಿನ ಒಂದೆಡೆ ಸೇರುತಿದ್ದೇವು. ಆದ್ದರಿಂದ ವಾಚನಾಲಯ ನಡೆಸುವ ಜವಾಬ್ದಾರಿ ನನಗೆ ವಹಿಸಿಕೊಡಲಾಯಿತು. ಕೆಲ ದಿನಗಳಲ್ಲಿಯೇ ನಾನು  ಆಗ 8 ಪುಟಗಳಲ್ಲಿ  ಮುದ್ರಿತವಾಗಿ ಜಿಲ್ಲೆಯಲ್ಲಿ ಮನೆಮಾತಾಗಿದ್ದ `ಉತ್ತರ ಕರ್ನಾಟಕ' ದಿನ ಪತ್ರಿಕೆ ವರದಿಗಾರನಾಗಿಯೂ ನೇಮಕಗೊಂಡೆ. ನಂತರ ಗುಲ್ಬರ್ಗದ `ಜನಬೆಂಬಲ' ಪತ್ರಿಕೆ,  ಬೆಂಗಳೂರಿನ `ಬಿಸಿಲ ಬದುಕು' ಪತ್ರಿಕೆಯ ವರದಿಗಾರನಾಗಿಯೂ ಕೆಲಸ ನಿರ್ವಹಿಸಿದೆ. 1997ರಿಂದ ಪ್ರಜಾವಾಣಿಯ ತಾಲ್ಲೂಕು ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.
     ಬಸವಕಲ್ಯಾಣದಲ್ಲಿ ಮೊದಲು ದಿ.ಶಂಕರಪ್ರಸಾದ ದುಬೆ, ದಿ.ಜಗದೇವಯ್ಯ ಸ್ವಾಮಿ, ದಿ.ಸಂಗಶೆಟ್ಟೆಪ್ಪ ಶಿವಣಕರ್, ದಾಂಡೇಕರ್, ಕಾಶಿನಾಥ ಅಂಬಲಗೆ ಅವರು ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದ್ದಾರೆ. ನಂತರ ಗುರುನಾಥ ಗಡ್ಡೆ, ಧನರಾಜ ಫುಲಾರೆ, ಪೃಥ್ವಿರಾಜ ಜಾಧವ, ಸುರೇಂದ್ರಗಿರಿ ಗೋಸ್ವಾಮಿ, ಮಲ್ಲಿಕಾರ್ಜುನ್  ಕಾಡಾದಿ, ಕಾಳಿದಾಸ ಘಾಳೆ, ಮಾಣಿಕ ಭುರೆ, ಖಾಜಾ ಸರ್ತಾಜೊದ್ದೀನ್, ಶಶಿಕಾಂತ ದುಬೆ, ಶಿವಪುತ್ರ ಕಾಡಾದಿ ಪತ್ರಿಕಾ ಕ್ಷೇತ್ರದಲ್ಲಿ ಸಕ್ರಿಯರಾದರು. 
   ಹಿರಿಯರಾಗಿದ್ದ ಸಂಗಶೆಟ್ಟೆಪ್ಪ ಶಿವಣಕರ್ ಅವರ ಒತ್ತಾಸೆ, ಅನ್ಯ ಪತ್ರಕರ್ತರ ಆಸಕ್ತಿ ಮತ್ತು ಬಸವೇಶ್ವರ ದೇವಸ್ಥಾನ ಪಂಚ ಸಮಿತಿ ಸಹಯೋಗದಿಂದ 1991 ರಲ್ಲಿ `ಭಾರತ ಕರ್ನಾಟಕ' ವಾಚನಾಲಯ ಸ್ಥಾಪಿತವಾಯಿತು. ಮೊದಲು ದೊಡ್ಡ ಪತ್ರಿಕೆಗಳಲ್ಲಿ ಹೆಚ್ಚಿನ ಸುದ್ದಿಗಳು ಬರುತ್ತಿರಲಿಲ್ಲ. ಆದ್ದರಿಂದ ಜಿಲ್ಲಾಮಟ್ಟದ ಪತ್ರಿಕೆಗಳಿಗೆ ಬಹಳಷ್ಟು ಮಹತ್ವವಿತ್ತು. ಬಸವಕಲ್ಯಾಣದಿಂದಲೇ ಹೊರಡುತ್ತಿದ್ದ ಇಲ್ಲಿನ ಪ್ರಥಮ ಕನ್ನಡ ದಿನಪತ್ರಿಕೆ `ಬಹಿರಂಗ ಸುದ್ದಿ' ಪತ್ರಿಕೆ ಪ್ರತಿದಿನ ತಾಜಾ ಸುದ್ದಿಗಳನ್ನು ಕೊಡುತ್ತಿತ್ತು. ಸಂಪಾದಕರಾದ ಗುರುನಾಥ ಗಡ್ಡೆ ಅವರು `ರಾಜ ಪ್ರಿಂಟಿಂಗ್ ಪ್ರೇಸ್'ನಲ್ಲಿ ಮೊದಲು ವಾರಪತ್ರಿಕೆಯನ್ನಾಗಿ ನಂತರ ವೆಂಕಟೇಶ ಥೇಟರ್ ಎದುರಿನ ತಮ್ಮದೇಯಾದ ವಿಜಯಲಕ್ಷ್ಮಿ ಪ್ರಿಂಟರ್ಸ್  ನಲ್ಲಿ ದಿನಪತ್ರಿಕೆಯನ್ನಾಗಿ ಮುದ್ರಿಸಿದರು. ಈ ಪತ್ರಿಕೆಯಲ್ಲಿ ಅಚ್ಚುಮೊಳೆ ಜೋಡಿಸುವ ಕೆಲಸ ಹಾಗೂ ಸುದ್ದಿ ಬರೆದು ಪತ್ರಿಕೆ ಮುದ್ರಿಸುವ ಕೆಲಸವನ್ನೂ ನಾನು ಮಾಡಿದ್ದೇನೆ. ಈಚೆಗೆ ಬಸವಕಲ್ಯಾಣದಲ್ಲಿ ಪತ್ರಕರ್ತರ ಸಂಖ್ಯೆ ಬೆಳೆದಿದೆ. ಪತ್ರಿಕೆ ಓದುಗರ ಸಂಖ್ಯೆಯೂ ಹೆಚ್ಚಾಗಿದೆ.

ದೇವು ಪತ್ತಾರ ಅವರಿಗೆ `ಉತ್ತಮ ಪತ್ರಕರ್ತ ಪ್ರಶಸ್ತಿ'
ಜುಲೈ 6 ರಂದು ನಡೆದ ಸಮಾರಂಭದಲ್ಲಿ 2011 ನೇ ಸಾಲಿನ 'ಶಂಕರಪ್ರಸಾದ ದುಬೆ ವಿಭಾಗಮಟ್ಟದ ಉತ್ತಮ ಪತ್ರಕರ್ತ ಪ್ರಶಸ್ತಿ'ಯನ್ನು ಪ್ರಜಾವಾಣಿಯ ಬೀದರ ಜಿಲ್ಲಾ ವರದಿಗಾರರಾದ ದೇವು ಪತ್ತಾರ ಅವರಿಗೆ ಕೊಟ್ಟು ಸನ್ಮಾನಿಸಲಾಯಿತು. ಮುಚಳಂಬ ನಾಗಭೂಷಣ ಸಂಸ್ಥಾನ ಮಠದ ಪ್ರಣವಾನಂದ ಸ್ವಾಮೀಜಿ, ಶಾಸಕ ಬಸವರಾಜ ಪಾಟೀಲ ಅಟ್ಟೂರ್, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಾಳಪ್ಪ ಅಡಸಾರೆ, ಇತರೆ ಪದಾಧಿಕಾರಿಗಳಾದ ಆನಂದ ದೇವಪ್ಪ, ಸಿದ್ರಾಮಯ್ಯ ಸ್ವಾಮಿ, ಸರ್ಕಾರಿ  ಪದವಿ ಕಾಲೇಜಿನ ಉಪನ್ಯಾಸಕ ಡಾ.ಗವಿಸಿದ್ಧಪ್ಪ ಪಾಟೀಲ, ನಗರಸಭೆ ಅಧ್ಯಕ್ಷೆ ಮಂಗಲಾಬಾಯಿ ಉದ್ರೆ ಅವರ ಸಮ್ಮುಖದಲ್ಲಿ ಪ್ರಶಸ್ತಿ ಕೊಡಲಾಯಿತು.
ಬಸವಕಲ್ಯಾಣದ ರಾಜಪುತ ಗಲ್ಲಿಯ ನಿವಾಸಿಯಾಗಿದ್ದ ದಿ. ಶಂಕರಪ್ರಸಾದ ದುಬೆ ಸುಮಾರು 20 ವರ್ಷಗಳ ಹಿಂದೆ ಬೀದರ ಜಿಲ್ಲೆಯ ಪ್ರಸಿದ್ಧ ಹಿಂದಿ ದೈನಿಕ 'ಬೀದರ ಕೀ ಆವಾಜ್' ಪತ್ರಿಕೆಯ ವರದಿಗಾರರಾಗಿದ್ದರು. ಹೈದ್ರಾಬಾದ ಹಾಗೂ ಇತರೆಡೆಯ ಪತ್ರಿಕೆಗಳಲ್ಲಿ ಅವರ ಲೇಖನಗಳು ಪ್ರಕಟವಾಗಿವೆ. ಅವರ ಸ್ಮರಣಾರ್ಥ ಪ್ರಶಸ್ತಿ ಕೊಡಲಾಗುತ್ತಿದೆ. ಅವರ ಮಕ್ಕಳಾದ ರಮಾಕಾಂತ ಮತ್ತು ಶಶಿಕಾಂತ ದುಬೆ ಅವರು ಪ್ರಶಸ್ತಿಯ ಪ್ರಾಯೋಜಕರಾಗಿದ್ದಾರೆ.
   ದುಬೆ ಅವರ ಹೆಸರಿನ ಪ್ರಶಸ್ತಿ ಪಡೆದಿರುವ ದೇವು ಪತ್ತಾರ ಅವರು ಅನೇಕ ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿದ್ದಾರೆ. ಗುಲ್ಬರ್ಗ ಜಿಲ್ಲೆಯ ಶಹಾಪುರದಲ್ಲಿ ಜನ್ಮಪಡೆದ ಇವರು ಈ ಮೊದಲು ಬೆಂಗಳೂರಿನಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದ್ದಾರೆ. ವಿವಿಧ ವಿಷಯಗಳ ಲೇಖನಗಳನ್ನು ಬರೆದಿದ್ದಾರೆ.
ಪತ್ತಾರರು ಸಾಹಿತ್ಯದಲ್ಲಿಯೂ ಗಮನಾರ್ಹ ಕೃಷಿ ಮಾಡಿದ್ದಾರೆ. 'ಈಗ ಹೀಗಿರುವ ಲೋಕದಲ್ಲಿ' 'ಕ್ಯಾಮೆರಾ ಎಂಜಿನಿಯರ್ ಮುಂತಾಕಾ' 'ಮಹಾದೇವಬಾಬಾ ಮೆಡೋಸ್ ಟೇಲರ್' ಎಂಬ ಇವರ ಕೃತಿಗಳು ಪ್ರಕಟವಾಗಿವೆ. ಈಚೆಗೆ ಇವರಿಗೆ ಸೇಡಂನಲ್ಲಿ ಹೈದ್ರಾಬಾದ ಕರ್ನಾಟಕ ಯುವ ಪತ್ರಕರ್ತರ ಪ್ರಶಸ್ತಿ ಕೊಡಲಾಗಿದೆ. ಭಾಲ್ಕಿ ಹಿರೇಮಠದಿಂದ ಪ್ರಶಸ್ತಿ ಕೊಟ್ಟು ಸನ್ಮಾನಿಸಲಾಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2010 ನೇ ಸಾಲಿನ ವಿಶೇಷ ಫೆಲೋಶಿಪ್ ದೊರೆತಿದೆ. ವಿವಿಧೆಡೆ ಉಪನ್ಯಾಸ ನೀಡಿದ್ದಾರೆ. ಉದಯೋನ್ಮುಖ ಪತ್ರಕರ್ತರಿಗೆ ಮಾರ್ಗದರ್ಶನ ಮಾಡಿದ್ದಾರೆ. ಇವರ ಈ ಅಮೂಲ್ಯ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ಕೊಡಲಾಗಿದೆ.
ಇದಲ್ಲದೆ, ಕಾರ್ಯಕ್ರಮದಲ್ಲಿ ಬೀದರನ 'ಕಾರಂಜಾ ಎಕ್ಸಪ್ರೆಸ್' ಪತ್ರಿಕೆ ಸಂಪಾದಕರಾದ ತಿಪ್ಪಣ್ಣ ಭೋಸ್ಲೆ ಅವರಿಗೆ 'ಜಿಲ್ಲಾ ಮಟ್ಟದ ಉತ್ತಮ ಸಂಪಾದಕರ ಪ್ರಶಸ್ತಿ' ಅಶೋಕಾ ಕೋಟೆ ಪತ್ರಿಕೆ ವರದಿಗಾರರಾದ ಸೋಮನಾಥ ಬಿರಾದಾರ ಅವರಿಗೆ 'ಜಿಲ್ಲಾಮಟ್ಟದ ಉತ್ತಮ ವರದಿಗಾರ ಪ್ರಶಸ್ತಿ ' ವಿಜಯ ಕರ್ನಾಟಕ ಪತ್ರಿಕೆ ತಾಲ್ಲೂಕು ವರದಿಗಾರ ಮಾರ್ತಂಡ ಜೋಶಿ ಅವರಿಗೆ 'ತಾಲ್ಲೂಕು     
 ಮಟ್ಟದ ಉತ್ತಮ ವರದಿಗಾರ ಪ್ರಶಸ್ತಿ' ಮತ್ತು ಬೀದರನ ಸಿಯಾಸತ್  ಉರ್ದು ಪತ್ರಿಕೆ        
 ವರದಿಗಾರ ಕೈಸರ್ ರೆಹಮಾನ ಅವರಿಗೆ 'ಕನ್ನಡೇತರ ಪತ್ರಿಕೆ ವರದಿಗಾರರ ಪ್ರಶಸ್ತಿ' 
 ಕೊಟ್ಟು ಸನ್ಮಾನಿಸಲಾಯಿತು. ಹಿರಿಯ ಪತ್ರಕರ್ತರಾದ ಧನರಾಜ ಫುಲಾರೆ ಅವರಿಗೆ    
 ಗೌರವ ಸನ್ಮಾನ ಮಾಡಲಾಯಿತು.
ಸಂಘದ ತಾಲ್ಲೂಕು ಅಧ್ಯಕ್ಷ ಗುರುನಾಥ ಗಡ್ಡೆ ಪ್ರಾಸ್ತಾವಿಕ ಭಾಷಣ ಮಾಡಿದರು. ಪತ್ರಕರ್ತ ವೀರಣ್ಣ ಮಂಠಾಳಕರ್ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿಕೊಟ್ಟರು. ಸಂಘದ ಕಾರ್ಯದರ್ಶಿ  ಕಲ್ಯಾಣರಾವ ಮದರಗಾಂವಕರ್ ಸ್ವಾಗತಿಸಿದರು. ಶಿವಯೋಗಿ ಸಿದ್ಧರಾಮೇಶ್ವರ ಕಾಲೇಜಿನ ಉಪನ್ಯಾಸಕ ಚನ್ನಬಸಪ್ಪ ಬಿರಾದಾರ ನಿರೂಪಿಸಿದರು. ಅಕ್ಕಮಹಾದೇವಿ ಕಾಲೇಜಿನ ಉಪನ್ಯಾಸಕ ಭೀಮಾಶಂಕರ (ಬಸವ)ಬಿರಾದಾರ ವಂದಿಸಿದರು. 
ಪತ್ರಕರ್ತರಾದ ಮುಕುಂದ ನಿಂಬಾಳಕರ್, ಶಿವಕುಮಾರ ಮಠಪತಿ, ನಾಗಪ್ಪ ನಿಣ್ಣೆ, ಉದಯಕುಮಾರ ಮುಳೆ, ಖಾಜಾ ಸರ್ತಾಜೊದ್ದೀನ್, ಸೂರ್ಯಕಾಂತ ಮದಕಟ್ಟಿ, ಶಾಂತಲಿಂಗ ಸ್ವಾಮಿ, ಮಲ್ಲಿಕಾರ್ಜುನ್  ಬಂಡೆ, ಡಿ.ಕೆ.ಪ್ರಹ್ಲಾದ್, ಪ್ರಭುಲಿಂಗಯ್ಯ ಟಂಕಸಾಲಿಮಠ, ಶಶಿಕಾಂತ ದುಬೆ, ನೈಮೊದ್ದೀನ್ ಚಾಬೂಕಸವಾರ, ಮಾಣಿಕ ಭುರೆ, ಮುಂತಾದವರು ಪಾಲ್ಗೊಂಡಿದ್ದರು.
2009 ನೇ ಸಾಲಿನಲ್ಲಿ `ಶಂಕರ ಪ್ರಸಾದ ದುಬೆ ವಿಭಾಗಮಟ್ಟದ ಉತ್ತಮ ಪತ್ರಕರ್ತರ ಪ್ರಶಸ್ತಿ'ಯನ್ನು  ಸಂಯುಕ್ತ ಕರ್ನಾಟಕ ಪತ್ರಿಕೆ ಗುಲ್ಬರ್ಗ ಆವೃತ್ತಿ ಸಂಪಾದಕರಾದ ಎಸ್.ಆರ್.ಮಣೂರ್ ಅವರಿಗೆ ಕೊಡಲಾಗಿದೆ. 2010 ನೇ ಸಾಲಿನ ಪ್ರಶಸ್ತಿಯನ್ನು ವಿಜಯಕರ್ನಾಟಕ ಪತ್ರಿಕೆ ಗುಲ್ಬರ್ಗ ಆವೃತ್ತಿ ಸಂಪಾದಕರಾದ ವಾದಿರಾಜ ವ್ಯಾಸಮುದ್ರ ಅವರಿಗೆ ಪ್ರದಾನ ಮಾಡಲಾಗಿದೆ.
 ಬೀದರ ಪತ್ರಕರ್ತರ ಹಳೆಯ ಫೋಟೊಗಳು....!?
ಬೀದರನಲ್ಲಿದಷ್ಟು ಸ್ಥಳೀಯ ಪತ್ರಿಕೆಗಳು ಬೇರೆ ಜಿಲ್ಲಾ ಕೇಂದ್ರಗಳಲ್ಲಿ ಇಲ್ಲ ಎನ್ನಲಾಗುತ್ತದೆ. ಆದ್ದರಿಂದ ಇಲ್ಲಿ ಪತ್ರಕರ್ತರ, ಸಂಪಾದಕರ ಸಂಖ್ಯೆಯೂ ಹೆಚ್ಚಾಗಿದೆ. ಕಳೆದ 20 ವರ್ಷಗಳಲ್ಲಿ ಪತ್ರಿಕಾ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇಂದು ರಾಜ್ಯಮಟ್ಟದ ಪತ್ರಿಕೆಗಳು ಗ್ರಾಮೀಣಭಾಗದ ಸುದ್ದಿಗಳಿಗೆ ಹೆಚ್ಚಾಗಿ ಪ್ರಕಟಿಸುತ್ತಿರುವ ಕಾರಣ ಸ್ಥಳೀಯ ಪತ್ರಿಕೆಗಳ ಮಹತ್ವ ಕಡಿಮೆಯಾಗಿದೆ. ಅಲ್ಲದೆ ಪತ್ರಿಕೆಯ ದರ ಸಮರದಲ್ಲಿ ಇವು ನೆಲೆ ನಿಲ್ಲದಂತಾಗಿವೆ. ಆದರೂ ಲಾಭ ಹಾನಿಯ ಲೆಕ್ಕ ಹಾಕದೆ ಅವುಗಳನ್ನು ಪ್ರಕಟಿಸಲಾಗುತ್ತಿದೆ. ಹೇಗೋ ಅವು ಜೀವ ಹಿಡಿದುಕೊಂಡಿವೆ ಎನ್ನಬಹುದು. 
   'ಉತ್ತರ ಕರ್ನಾಟಕ' 'ಬೀದರ ಕೀ ಆವಾಜ್' 'ದಮನ' 'ಬೀದರ ಸಂದೇಶ' 'ಪಬ್ಲಿಕ್' 'ಬೀದರ ರಹಸ್ಯ' 'ಜನಪರ' 'ಜನದನಿ' 'ವಚನ ಕ್ರಾಂತಿ' 'ಕಾರಂಜಾ ಎಕ್ಸಪ್ರೆಸ್'  'ಅಶೋಕಾ ಕೋಟೆ' 'ಪರಿಹಾರ' 'ಯುವರಂಗ' 'ಬೀದರ ಕ್ರಾಂತಿ' 'ಸುರ್ಕ ಜಮೀನ' `ಅಂತರಂಗ ಸುದ್ದಿ' 'ಸೀಮಾ ವಾರ್ತಾ ' 'ಹೈದ್ರಾಬಾದ್ ಕರ್ನಾಟಕ' `ಆದಿತ್ಯ' ಮುಂತಾದ ಪತ್ರಿಕೆಗಳನ್ನು ಅನೇಕ ವರ್ಷಗಳಿಂದ ಪ್ರಕಟಿಸಲಾಗುತ್ತಿದೆ.
ಈ ಪತ್ರಿಕೆಗಳ ಸಂಪಾದಕರ ಮತ್ತು ವರದಿಗಾರರ ಕೆಲ ವರ್ಷಗಳ ಹಿಂದಿನ ಫೋಟೊಗಳನ್ನು ಇಲ್ಲಿ ಕೊಡಲಾಗಿದೆ. ಫೋಟೊದಲ್ಲಿ 14 ವರ್ಷಗಳ ಹಿಂದೆ ಪ್ರಜಾವಾಣಿ ಜಿಲ್ಲಾ ವರದಿಗಾರರಾಗಿದ್ದ ಅರುಣಕುಮಾರ ಹಬ್ಬು, ಸಂಯುಕ್ತ ಕರ್ನಾಟಕ ಪತ್ರಿಕೆ ವರದಿಗಾರರಾಗಿದ್ದ ರಾಜಾರಾವ, ಈಗ ಎಂಎಲ್ಸಿ ಆಗಿರುವ ಬೀದರ ಕೀ ಆವಾಜ್ ಪತ್ರಿಕೆಯ ಸಂಪಾದಕ ಕಾಜಿ ಅರ್ಷದ್ ಅಲಿ, ಉತ್ತರ ಕರ್ನಾಟಕ ಪತ್ರಿಕೆ ಸಂಪಾದಕ ಶಿವಶರಣಪ್ಪ ವಾಲಿ, ಕಾರಂಜಾ ಎಕ್ಸಪ್ರೆಸ್ ಪತ್ರಿಕೆ ಸಂಪಾದಕ ತಿಪ್ಪಣ್ಣ ಭೋಸ್ಲೆ, ಬೀದರ ರಹಸ್ಯ ಪತ್ರಿಕೆ ಸಂಪಾದಕ ಡಿ.ಕೆ.ಸಿದ್ರಾಮ, ವಚನಕ್ರಾಂತಿ ಪತ್ರಿಕೆ ಸಂಪಾದಕ ಬಾಬು ವಾಲಿ, ಇತರರಾದ ಕಮಲಾಕರ ಜೋಶಿ, ಗಂಧರ್ವಸೇನಾ, ಮಲ್ಲಿಕಾರ್ಜುನ್ ಸ್ವಾಮಿ, ಮಲ್ಲಿಕಾರ್ಜುನ್  ಬಿರಾದಾರ, ಮಾರುತಿ ಬಾವಿದೊಡ್ಡಿ, ನಾಗಶೆಟ್ಟಿ ಧರ್ಮಪೂರ, ಸೋಮನಾಥ ಬಿರಾದಾರ, ವೀರಶೆಟ್ಟಿ ಕುಂಬಾರ, ವಿಜಯಕುಮಾರ ಪರ್ಮಾ, ಶಿವಕುಮಾರ ಡಾಕುಳಗಿ ಮುಂತಾದವರನ್ನು ಫೋಟೊಗಳಲ್ಲಿ ಕಾಣಬಹುದು.
                                        ----------------------

ಶುಕ್ರವಾರ, ಜುಲೈ 22, 2011

'ದಲಿತ ಪೀಠಾಧಿಪತಿ' ಕೃತಿಗೆ ಕಸಾಪ ಪ್ರಶಸ್ತಿ




     ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಿನ 
2011 ನೇ ಸಾಲಿನ 'ಜಿ.ಆರ್.ರೇವಯ್ಯ ದತ್ತಿ ಪ್ರಶಸ್ತಿ' 
ನನ್ನ (ಮಾಣಿಕ ಆರ್.ಭುರೆ) 2010 ರಲ್ಲಿ 
ಪ್ರಕಟವಾದ 
(ಪ್ರಕಾಶಕರು- ಶರಣ ಉರಿಲಿಂಗಪೆದ್ದಿ ಮಠ ಟ್ರಸ್ಟ್ ಬೇಲೂರು) 
ಕೃತಿ `ದಲಿತ ಪೀಠಾಧಿಪತಿ'ಗೆ ದೊರೆತಿರುವುದು 
ನನಗೆ ಅತೀವ ಸಂತಸ ತಂದ ವಿಷಯ.
 28 ನೇ ಏಪ್ರಿಲ್ 2011 ರಂದು 
ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ 
ಶ್ರೀಕೃಷ್ಣರಾಜ ಭವನದಲ್ಲಿ 
ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.      
     ಹೆಸರಾಂತ ಕವಿ ಬಿ.ಆರ್.ಲಕ್ಷ್ಮಣರಾವ 
ಸಮಾರಂಭ ಉದ್ಘಾಟಿಸಿದರು.
ಜಯನಗರ ಕ್ಷೇತ್ರದ ಶಾಸಕ ವಿಜಯಕುಮಾರ, 
ರಾಜ್ಯ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ 
ವೈ.ಕೆ.ಮುದ್ದುಕೃಷ್ಣ, 
ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ 
ಡಾ.ನಲ್ಲೂರುಪ್ರಸಾದ, 
ಗೌರವ ಕೋಶಾಧ್ಯಕ್ಷ ಪುಂಡಲೀಕ್ ಹಾಲಂಬಿ, 
ಗೌರವ ಕಾರ್ಯದರ್ಶಿ ಪ್ರೊ.ಎಚ್.ಕೆ.ಮಳಲಿಗೌಡ, ಸಂಗಮೇಶ ಬಾದವಾಡಗಿ ಪಾಲ್ಗೊಂಡಿದ್ದರು.
  
 ಈ ಸಂದರ್ಭದಲ್ಲಿ ನನ್ನನ್ನೊಳಗೊಂಡು 31 ಜನರಿಗೆ 
ವಿವಿಧ ದತ್ತಿ ಪ್ರಶಸ್ತಿಗಳನ್ನು ಕೊಟ್ಟು ಸನ್ಮಾನಿಸಲಾಯಿತು. ಪ್ರಶಸ್ತಿಯ ಹೆಸರು, ಕೃತಿ ಮತ್ತು ಪಡೆದವರ ಹೆಸರುಗಳು ಮುಂದಿನಂತಿವೆ.


1) ಮಲ್ಲಿಕಾ ಪ್ರಶಸ್ತಿ ದತ್ತಿ (ನಾನೇನೂ ಅಲ್ಲ) 
    -ಕುಲಶೇಖರಿ
2) ಅಂತಾರಾಷ್ಟ್ರೀಯ ಮಹಿಳಾ ವರ್ಷದ ಪ್ರಶಸ್ತಿ (ಯೋಗಕ್ಷೇಮ) 
    - ಡಾ.ಕೆ.ಎಸ್.ಚೈತ್ರಾ
3) ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ (ಜಲದ ಮಂಟಪದ ಮೇಲೆ)
    - ಜ್ಯೋತಿ ಬಿ.ಕುಲಕರಣಿ
4) ಲಲಿತಾದೇವಿ ಗುರುಸಿದ್ಧಪ್ಪ ಸಿಂಧೂರ ದತ್ತಿ (ಪ್ರೇಮ ಸಿಂಚನ)
    -ಲತಾ ಶ್ರೀಧರ
5) ನೀಲಗಂಗಾ ದತ್ತಿ ಪ್ರಶಸ್ತಿ (ಕವಿತೆ ಬರೆಯಲೆ ನಾನು) 
    - ಶಾರದಾ ವಿ.ಮೂರ್ತಿ
6) ಶ್ರೀಮತಿ ಕೆ.ಎಸ್.ಭಾರತಿ ರಾಜಾರಾಮ ಮಧ್ಯಸ್ಥ ದತ್ತಿ (ಕಥೆಯಲ್ಲ ಬದುಕು) 
    - ಯಶೋಧ ಚೆನ್ನಿ
7) ಶಾರದಾ ಆರ್.ರಾವ ದತ್ತಿ (ಮನ -ಮನನ) 
     - ಡಾ.ಕೆ.ಎಸ್.ಪವಿತ್ರ
8) ಗೌರಮ್ಮ ಹಾರ್ನಳ್ಳಿ ಕೆ.ಮಂಜಪ್ಪ ದತ್ತಿ ಪ್ರಶಸ್ತಿ (ಅವಲೋಕನ) 
    -ರತ್ನಶೀಲಾ ಗುರಡ್ಡಿ
9) ಎಚ್.ಕರಿಯಣ್ಣ ದತ್ತಿ ಪ್ರಶಸ್ತಿ (ಎಷ್ಟು ಬಣ್ಣ ಇರುಳು) 
     -ಮುದ್ದು ತೀರ್ಥಹಳ್ಳಿ
10) ಡಾ.ಎಚ್.ನರಸಿಂಹಯ್ಯ ದತ್ತಿ ಪ್ರಶಸ್ತಿ (ಇದೂ ಸಾಧ್ಯ) 
     -ಹುಲಿಕಲ್ ನಟರಾಜ್
11) ಅಸುಂಡಿ ಹುದ್ದಾರ ಕೃಷ್ಣರಾವ ಸ್ಮಾರಕ ದತ್ತಿ ಪ್ರಶಸ್ತಿ (ದಾಸ ಸಾಹಿತ್ಯ ಭಾಷೆ)
     -ಡಾ.ಎಸ್.ಎಸ್.ಅಂಗಡಿ
12) ಜಿ.ಪಿ.ರಾಜರತ್ನಂ ಸಂಸ್ಮರಣ ದತ್ತಿ ಪ್ರಶಸ್ತಿ (ಮಕ್ಕಳಿಗಾಗಿ ನೀತಿಕತೆಗಳು)
      -ಪ.ರಾಮಕೃಷ್ಣಶಾಸ್ತ್ರೀ
13) ಶ್ರೀಮತಿ ಕೆ.ವಿ.ರತ್ನಮ್ಮ ದತ್ತಿ ಪ್ರಶಸ್ತಿ (ಕಾವ್ಯಸುಧೆ)  
     -ಸುಧಾ ಭ.ಮರಿಗೌಡ್ರ
14) ರತ್ನಾಕರವರ್ಣಿ ಮುದ್ದಣ್ಣ ಅನಾಮಿಕ ದತ್ತಿ -ಗದ್ಯಕೃತಿ(ಇಸ್ಲಾಮಿನ ಇತಿಹಾಸ) 
      -ಪಿ.ಕೆ.ಶಂಷುದ್ದೀನ್
15) ರತ್ನಾಕರವರ್ಣಿ ಮುದ್ದಣ್ಣ ಅನಾಮಿಕ ದತ್ತಿ -ಪದ್ಯಕೃತಿ(ಹಾರಯಿಕೆ)
      - ವಸಂತ ಕುಷ್ಟಗಿ
16) ಪಿ.ಶಾಂತಿಲಾಲ ದತ್ತಿ ಪ್ರಶಸ್ತಿ(ಜಿನದನಿ) 
     -ಡಿ.ಎನ್.ಅಕ್ಕಿ
17) ಅಕ್ಕಮ್ಮ ಗಿರಿಗೌಡ ರುದ್ರಪ್ಪ ದತ್ತಿ ಪ್ರಶಸ್ತಿ (ಹೊನ್ನ ಬಿತ್ಯಾರ ಹೊಲಿಸಾಲ)
      -ಬಸವರಾಜ ಆಕಳವಾಡಿ
18) ಶ್ರೀಮತಿ ಜಯಲಕ್ಷ್ಮಮ್ಮ ಬಿ.ಎಸ್.ಸಣ್ಣಯ್ಯ ದತ್ತಿ ಪ್ರಶಸ್ತಿ(ಪುರಾಣ ಪುರುಷ ರತ್ನಗಳು)
     -ವಿಜಯಾ ಸುಬ್ರಹ್ಮಣ್ಯ
19) ಕುಂಬಾಸ ದತ್ತಿ ಪ್ರಶಸ್ತಿ(ನಗೆ ನಗಾರಿ)
      -ಜೀಜೀ(ಗಣೇಶ ಪ್ರಸಾದ)
20) ಪ್ರೊ.ಡಿ.ಸಿ.ಅನಂತಸ್ವಾಮಿ ಸಂಸ್ಮರಣ ದತ್ತಿ ಪ್ರಶಸ್ತಿ(ಕದಡದಿರಿ ತಿಳಿನೀರ ಕೊಡ)
      -ಡಾ.ವಿ.ಬಿ.ರಡ್ಡೇರ್
21) ಜಿ.ಆರ್.ರೇವಯ್ಯ ದತ್ತಿ ಪ್ರಶಸ್ತಿ(ದಲಿತ ಪೀಠಾಧಿಪತಿ) 
      -ಮಾಣಿಕ ಆರ್.ಭುರೆ
22) ಸಿಸು ಸಂಗಮೇಶ ದತ್ತಿ ಪ್ರಶಸ್ತಿ(ಹಲೋ ಹಲೋ ಚಂದಮಾಮ) 
      -ರಾಧೇಶ ತೋಲ್ಪಾಡಿ
23) ಪಂಪಮ್ಮ ಶರಣೇಗೌಡ ವಿರುಪಾಪುರ ದತ್ತಿ ಪ್ರಶಸ್ತಿ(ಬಾಳು ಬೆಳಗಿದವರು) 
      -ಶರಣಪ್ಪ ಗುಡದಿನ್ನಿ
24) ಕೆ.ಎಸ್.ವಾಸುದೇವಾಚಾರ್ ದತ್ತಿ (ಕಾಲುದಾರ
       - ದವನ ಸೊರಬ
25) ಡಾ.ಆರ್.ಜೆ.ಗಲಗಲಿ ದತ್ತಿ ಪ್ರಶಸ್ತಿ(ಬಣ್ಣದ ಚಿಟ್ಟೆ) 
      -ಆರ್.ಎಸ್.ಚಾಪಗಾವಿ
26) ಹೊಳಲ್ಕೆರೆ ಪದ್ಮಾವತಮ್ಮ ಶ್ರೀಪಾಲಶೆಟ್ಟಿ ಡಾ.ಮದನಕೇಸರಿ 
      ಜೈನ್ ದತ್ತಿ( ನಿಕಷ-1) -ಡಾ.ಎಸ್.ಪಿ.ಪದ್ಮಪ್ರಸಾದ
27) ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ- ಕಾದಂಬರಿ(ನಮ್ಮೂರ ಓಣಿಯ) 
      -ಬಶೀರ ಅಹ್ಮದ್
28)   "   ಕಾದಂಬರಿ (ಹೃದಯದ ಸದ್ದುಗಳು) 
       -ಹೊಸಮನಿ
29)   "  ಸಣ್ಣಕತೆ (ಪ್ರಕೃತಿಯ ನೆರಳಲ್ಲಿ) 
       -ಹೊನ್ನಶೆಟ್ಟಿಹಳ್ಳಿ ಗಿರಿರಾಜ್
30)   "  ಮಕ್ಕಳ ಸಾಹಿತ್ಯ (ಚಿಂಪಿ) 
        -ಮುಮ್ತಾಜ್ ಬೆಗಂ
31)   "  ಅನುವಾದಿತ/ವೈಚಾರಿಕ ಕೃತಿ (ಮಂತಣ) 
        -ಡಾ.ಅರ್ಜುನಪುರಿ  ಅಪ್ಪಾಜಿಗೌಡ್
         -------------------------------------------
 'ದಲಿತ ಪೀಠಾಧಿಪತಿ' ಪುಸ್ತಕದ ಬಗ್ಗೆ ಡಾ.ಜಿ.ಬಿ.ವಿಸಾಜಿ ಅಭಿಪ್ರಾಯ


      `ದಲಿತ ಪೀಠಾಧಿಪತಿ' ಕೃತಿಯ ಬಗ್ಗೆ ಬೀದರ ಜಿಲ್ಲೆಯ ಹಿರಿಯ ಸಾಹಿತಿಗಳು, 
ನಿವೃತ್ತ ಉಪನ್ಯಾಸಕರಾದ ಡಾ.ಜಿ.ಬಿ.ವಿಸಾಜಿ ಅವರು ಪತ್ರ ಬರೆದು 
ತಿಳಿಸಿದ ಅಭಿಪ್ರಾಯ ಹೀಗಿದೆ.....
                                                    ಭಾಲ್ಕಿ
                                                  16-7-2011
   ` ಆತ್ಮೀಯರೆ, ತಾವು ಪ್ರೀತಿಯಿಂದ ಕೊಟ್ಟ `ದಲಿತ ಪೀಠಾಧಿಪತಿ' 
ಪುಸ್ತಕ ಓದಿ ಮುಗಿಸಿದೆ. 
ಪೂಜ್ಯ ಪಂಚಾಕ್ಷರಿ ಸ್ವಾಮಿ ಪರಿಚಯವಷ್ಟೇ ಇರಬಹುದೆಂದು 
ತಿಳಿದಿದ್ದೆ. ಆದರೆ 1) ಶೂದ್ರವರ್ಣದ ಬಗ್ಗೆ ಸತ್ಯಾನ್ವೇಷಣೆ 
2)ಜನರೆಡೆಗೆ ದೇವರು 3)ಸತ್ಯಶೋಧಕ ಸಮಾಜ 4)ಬಸವಯುಗ
 5) ದಲಿತ ಪೀಠಾಧಿಪತಿ 6)ಬೇಲೂರು, ಉರಿಲಿಂಗಪೆದ್ದಿ 
ಸಂಬಂಧ ಮತ್ತು ಪರಂಪರೆ 
7) ಬಸವಕಲ್ಯಾಣದ ಶರಣ ಸ್ಥಳಗಳು ಮತ್ತು ಅಭಿವೃದ್ಧಿ 
8) ಗ್ರಂಥಋಣ 9) ಚಿತ್ರಗಳು ಪುಸ್ತಕದ ಘನತೆಯನ್ನು ಹೆಚ್ಚಿಸಿವೆ. 
ಎಲ್ಲಿಯೂ ಸ್ವಹಿತಾಸಕ್ತಿಯಾಗಲಿ, 
ಪೂರ್ವಾಗ್ರಹಪೀಡಿತತನವಾಗಲಿ ಕಾಣಲಿಲ್ಲ. 
ಬರವಣಿಗೆಯಲ್ಲಿ ಖಚಿತತೆ, ನಿಖರತೆ, ಪ್ರಾಮಾಣಿಕತೆ 
ನಿಚ್ಚಳವಾಗಿ ಕಾಣುತ್ತದೆ. 
ಇದಕ್ಕೂ ಹಿರಿದಾದ ಪುಸ್ತಕ ರಚನೆಗೆ ಸಿದ್ಧರಾಗಿ 
ನಮ್ಮ ಸಂತೋಷವನ್ನು ಹೆಚ್ಚಿಸಿರಿ. 
ವಂದನೆಗಳು.
                                     ತಮ್ಮ ವಿಶ್ವಾಸಿ
                                     ಜಿ.ಬಿ.ವಿಸಾಜಿ
                              ------------ -------------

ಪ್ರಶಸ್ತಿ ಬಂದಿದಕ್ಕಾಗಿ ಸಂಘಟನೆಗಳ ಒಕ್ಕೂಟದಿಂದ ಸನ್ಮಾನ
  
     2ನೇ ಮೇ 2011 ರಂದು ಬಸವಕಲ್ಯಾಣದ ಕಲ್ಯಾಣ ಮಂಟಪದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಮೂವರು ಹಿರಿಯರ ಜತೆ `ದಲಿತ ಪೀಠಾಧಿಪತಿ' ಪುಸ್ತಕಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿ.ಆರ್.ರೇವಯ್ಯ ದತ್ತಿ ಪ್ರಶಸ್ತಿ ಬಂದಿದಕ್ಕಾಗಿ ನನ್ನನ್ನು(ಮಾಣಿಕ ಭುರೆ) ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಸವಕಲ್ಯಾಣದ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಸ ರಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ನಾಗೇಂದ್ರ ಢೋಲೆ ಅವರ 
ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
    ರಾಜ್ಯ ಸರಕಾರದ `ಡಾ.ಬಿ.ಆರ್.ಅಂಬೇಡ್ಕರ ಪ್ರಶಸ್ತಿ' ಪುರಸ್ಕೃತರಾದ ಪ್ರಸಿದ್ಧ ನ್ಯಾಯವಾದಿ ತಾತೇರಾವ ಕಾಂಬಳೆ, `ಡಾ.ಬಾಬು ಜಗಜೀವನರಾಮ ಪ್ರಶಸ್ತಿ' 
ಪಡೆದ ಮಾಜಿ ವಿಧಾನ ಪರಿಷತ್  ಸದಸ್ಯ ಮಾರುತಿರಾವ ಡಿ.ಮಾಲೆ, 11 ನೇ ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಪತ್ರಕರ್ತ ಶಿವಶರಣಪ್ಪ ವಾಲಿ ಅವರು ಇತರೆ ಸನ್ಮಾನಿತರಾಗಿದ್ದಾರೆ.
     ಕೌಠಾ ಬಸವಯೋಗಾಶ್ರಮದ ಬೆಲ್ದಾಳ ಸಿದ್ಧರಾಮ ಶರಣರು ನೇತೃತ್ವ ವಹಿಸಿದ್ದರು. ಕರ್ನಾಟಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಂಚಾಕ್ಷರಿ ಹಿರೇಮಠ, ಧರಿನಾಡು ಕನ್ನಡ ಸಂಘದ ಅಧ್ಯಕ್ಷ ಜೈಶೇನ ಪ್ರಸಾದ, ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಈಶ್ವರ ಹೆಬ್ಬಾಳಕರ್, ಜಾನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಾಂತಲಿಂಗ ಮಠಪತಿ, ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಣ್ಣ ಮಂಠಾಳಕರ್, ಲೋಹಿಯಾ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ಸಿಂಧೆ, ಕರ್ನಾಟಕ ರಕ್ಷಣಾ ವೇದಿಕೆ ಸಂಚಾಲಕ ಧನರಾಜ ರಾಜೋಳೆ, ಕಲ್ಯಾಣ ಕನ್ನಡ ಸಂಘದ ಅಧ್ಯಕ್ಷ ನಾಗೇಂದ್ರ ಬಿರಾದಾರ, ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ದಶವಂತ ಬಂಡೆ, ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಿತ್ರಶೇಖರ ಚಿರಳ್ಳಿ, ಸಂಗೀತ ಕಲಾ ಪರಿಷತ್ತಿನ ಅಧ್ಯಕ್ಷ ಶೇಷಪ್ಪ ಗಬ್ಬೂರ್ ಉಪಸ್ಥಿತರಿದ್ದರು.
    ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಾ.ಗವಿಸಿದ್ಧಪ್ಪ ಪಾಟೀಲ ಸ್ವಾಗತಿಸಿದರು. ಉಪನ್ಯಾಸಕಿ ಶಿವಲೀಲಾ ಮಠಪತಿ ನಿರೂಪಿಸಿದರು. ಬರಹಗಾರರ ಸಂಘದ ಅಧ್ಯಕ್ಷ ಭೀಮಾಶಂಕರ (ಬಸವ) ಬಿರಾದಾರ ವಂದಿಸಿದರು.
                          ------------------  


ಗುರುವಾರ, ಜುಲೈ 21, 2011

ಪುಸ್ತಕಗಳ ಮುಖಪುಟ ವಿನ್ಯಾಸ...




     ಕಂಪ್ಯೂಟರಗಳು 
    ಬಂದಮೇಲೆ  
    ಚಿತ್ರಕಲಾವಿದರು 
     ಪುಸ್ತಕಗಳ 
     ಮುಖಪುಟ 
     ರಚಿಸುವುದು ತಪ್ಪಿದೆ.
     ಚಿತ್ರಕಲೆ ಕಲಿಯದ 
      ನನ್ನಂಥವರು 
     ಸಹ ಕಂಪ್ಯೂಟರನ
      ಕೀಲಿಮಣಿ ಮತ್ತು 
     ಮೌಸ್ ಬಳಸಿ 
     `ಫೋಟೊಶಾಪ್'ನಲ್ಲಿ 
     ಮುಖಪುಟ
     ವಿನ್ಯಾಸ ಮಾಡುವುದು 
       ಸಾಧ್ಯವಾಗಿದೆ. 
    ಹಾಗೆ ನೋಡಿದರೆ 
     ಪುಸ್ತಕದಲ್ಲಿನ ವಿಷಯ, 
      ಕೃತಿಕಾರನ ಆಶಯಕ್ಕೆ 
      ತಕ್ಕಂತೆ 
      ಮುಖಪುಟ ರಚಿಸುವುದು 
     ಕಷ್ಟಸಾಧ್ಯ 
     ಕೆಲಸವೇ ಆಗಿದೆ. 
      ಆದರೂ ನಾನು 
      ರಚಿಸಿಕೊಟ್ಟ 
     ಮುಖಪುಟ ಮತ್ತು 
     ಹಿಂಬದಿಪುಟವನ್ನು  
      ಮಿತ್ರರಾದ 
    ವೀರಣ್ಣ ಮಂಠಾಳಕರ್ 
    ಹಾಗೂ ಕವಯತ್ರಿ 
    ಮಲ್ಲೇಶ್ವರಿ ಉದಯಗಿರಿ 
    ಅವರು ತಮ್ಮ ಪುಸ್ತಕಗಳಿಗೆ 
     ಅಳವಡಿಸಿ ಮುದ್ರಿಸಿದ್ದಾರೆ.
    ನಾನು ರಚಿಸಿಕೊಟ್ಟ 
     ವೀರಣ್ಣ ಮಂಠಾಳಕರ್ 
    ಅವರ  6 ನೇ ಕೃತಿ 
    `ಬದುಕಿನ ಬೆನ್ನೇರಿ' 
      ಕಥಾ ಸಂಕಲನ 
         ಮತ್ತು 
    ಮಲ್ಲೇಶ್ವರಿ ಉದಯಗಿರಿ ಅವರ 
     3 ನೇ ಕವನ ಸಂಕಲನ 
         `ಭಾವಂಕರ್ಷ'ದ 
      ಮುಖಪುಟ ಮತ್ತು 
     ಬೆನ್ನುಪುಟದ ಚಿತ್ರ ಇಲ್ಲಿ 
       ಕೊಡಲಾಗಿದೆ.
    ಉದಯಗಿರಿ ಅವರ 
      ಪುಸ್ತಕದ ಬೆನ್ನುಡಿ 
      ಸಹ  ನಾನು ಬರೆದಿದ್ದೇನೆ.
  ಈ ಎರಡೂ ಪುಸ್ತಕಗಳನ್ನು 
    2011ನೇ ಸಾಲಿನ 
       ಫೆಬ್ರುವರಿಯಲ್ಲಿ 
     ಬಸವಕಲ್ಯಾಣ ತಾಲ್ಲೂಕಿನ 
     ಬೇಲೂರನಲ್ಲಿ ನಡೆದ 
   ಉರಿಲಿಂಗಪೆದ್ದಿ ಉತ್ಸವದಲ್ಲಿ 
     ಬಿಡುಗಡೆ 
     ಮಾಡಲಾಯಿತು. 
     ಉರಿಲಿಂಗಪೆದ್ದಿ ಮಠ ಟ್ರಸ್ಟ್ ನಿಂದ 
     ಇವನ್ನು ಪ್ರಕಟಿಸಲಾಗಿದೆ. 
      ಪುಸ್ತಕ ಬಿಡುಗಡೆ 
       ಸಮಾರಂಭದಲ್ಲಿ 
       ಭಾಲ್ಕಿಯ 
    ಬಸವಲಿಂಗ ಪಟ್ಟದ್ದೇವರು, 
        ಬೇಲೂರ 
     ಪಂಚಾಕ್ಷರಿ ಉರಿಲಿಂಗಪೆದ್ದಿ ಸ್ವಾಮೀಜಿ, 
      ಬಸವಕಲ್ಯಾಣದ 
      ಸರಕಾರಿ  ಪದವಿ ಕಾಲೇಜಿನ 
     ಪ್ರಾಚಾರ್ಯ ನಾಗೇಂದ್ರ ಢೋಲೆ, 
     ಮಹಾಂತೇಶ ನವಲಕಲ್, 
     ನಗರಸಭೆ ಸದಸ್ಯ 
      ಸೂರ್ಯಕಾಂತ ಚಿಲ್ಲಾಬಟ್ಟೆ 
     ಮುಂತಾದವರು 
       ಉಪಸ್ಥಿತರಿದ್ದರು.
    ಈ ಸಂದರ್ಭದಲ್ಲಿ  
       ವೀರಣ್ಣ ಮಂಠಾಳಕರ್ 
    ಹಾಗೂ ಮಲ್ಲೇಶ್ವರಿ ಉದಯಗಿರಿ 
     ಅವರನ್ನು 
      ಸನ್ಮಾನಪತ್ರ ಕೊಟ್ಟು 
       ಸತ್ಕರಿಸಲಾಯಿತು.
      ವಿಜಯಲಕ್ಷ್ಮಿ ಗಡ್ಡೆ ಅವರ
      `ಉರಿಲಿಂಗಪೆದ್ದಿ ವಚನಗಳ 
          ಅಂತರಂಗ' 
       ಪುಸ್ತಕಕ್ಕೆ ಮತ್ತು 
        ಕಥೆಗಾರ 
      ಮಹಾಂತೇಶ  ನವಲಕಲ್ ಅವರ
       'ಉರಿಲಿಂಗ ದೇವರು, 
        ಉರಿಲಿಂಗ ಪೆದ್ದಿ 
       ಮತ್ತು ಕಾಳವ್ವೆ 
       ವಚನಗಳ ಸಂಗ್ರಹ' 
     ಪುಸ್ತಕಕ್ಕೆ ನಾನು ರಚಿಸಿದ 
       ಮುಖಪುಟ ಸಹ 
      ಇಲ್ಲಿ  ಕೊಟ್ಟಿದ್ದೇನೆ. 
     ಈ ಎರಡೂ 
        ಪುಸ್ತಕಗಳು ಇನ್ನೂ 
     (ಜುಲೈ 2011 ರವರೆಗೆ) 
      ಪ್ರಕಟವಾಗಿಲ್ಲ. 
      ಇದಲ್ಲದೆ ನಾನು 
       ಸಿದ್ಧಪಡಿಸಿದ 
       ಪ್ರಶಸ್ತಿ ಪತ್ರದ 
        ನಮೂನೆಯನ್ನು 
       ಸಹ ಇಲ್ಲಿ 
       ಕೊಟ್ಟಿದ್ದೇನೆ.