ಬುಧವಾರ, ಅಕ್ಟೋಬರ್ 13, 2010

ದಲಿತ ಪೀಠಾಧಿಪತಿಯೇ ಏಕೆ?



      ಸೆಪ್ಟೆಂಬರ್ (2010) 16ರಂದು ದಿನ ಪತ್ರಿಕೆಗಳಲ್ಲಿ ಎರಡು ಪ್ರಮುಖ ಸುದ್ದಿಗಳು ಪ್ರಕಟವಾಗಿದ್ದವು. ಮೈಸೂರಿನ ಕೃಷ್ಣಮೂರ್ತಿಪುರಂನ ಬ್ರಾಹ್ಮಣರ ಬೀದಿಯಲ್ಲಿ ಸಾಮರಸ್ಯ ನಡಿಗೆ ಆರಂಭಿಸಿದ ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮಿಯವರ ಪಾದಪೂಜೆ ಮಾಡಿದ ಬಗ್ಗೆ ಹಾಗೂ ಅಸ್ವಸ್ಥರಾಗಿದ್ದ ಗಾನಯೋಗಿ ಪಂ.ಪುಟ್ಟರಾಜ ಗವಾಯಿ (17 ರಂದು ಲಿಂಗೈಕ್ಯರಾದರು) ಅವರು ಗುಣಮುಖರಾಗಲಿ ಎಂದು ಗದಗನಲ್ಲಿ ಜಾತಿ ಭೇದ ಮಾಡದೆ ಎಲ್ಲರೂ ಮಠ ಮಂದಿರಗಳಲ್ಲಿ ಪ್ರಾರ್ಥನೆ ಸಲ್ಲಿಸಿರುವುದು. ಎರಡೂ ಮನಸ್ಸಿಗೆ ನಾಟುವಂತಹವು. ಪ್ರೇರಣೆ ಕೊಡುವಂತಹವು. ಪರಿವರ್ತನೆ ತರುವಂತಹವು.
   ಉಡುಪಿಯ ಪೇಜಾವರ ವಿಶ್ವೇಶತೀರ್ಥ ಸ್ವಾಮಿಯವರ ಸಲಹೆಯಂತೆ ಮಾದಾರ ಚನ್ನಯ್ಯ ಸ್ವಾಮಿಯವರು ಸಾಮರಸ್ಯ ನಡಿಗೆ ಆರಂಭಿಸಿ ಅಸ್ಪೃಶ್ಯತೆ, ಜಾತಿಯತೆಯ ಭಾವನೆ ಹೊಗಲಾಡಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯನ್ನಿಟ್ಟರು ಎನ್ನಬಹುದು. ಪುಟ್ಟರಾಜ ಗವಾಯಿಗಳು ಜಾತಿ, ಧರ್ಮ ಲೆಕ್ಕಿಸದೆ ಸಂಗೀತ ವಿದ್ಯೆ ಕೊಟ್ಟು ಅಂಧ ಅನಾಥರ ಜೀವನಕ್ಕೆ ಬೆಳಕು ಕೊಟ್ಟವರು. ಬೀದಿಯಲ್ಲಿ ಬೇಡದೆ ಗತ್ಯಂತರವಿಲ್ಲ ಎನ್ನುವ ಪರಿಸ್ಥಿತಿಯಲ್ಲಿದ್ದವರಿಗೆ ಗೌರವದಿಂದ ಬದುಕುವ ಮಾರ್ಗ ಕಲ್ಪಿಸಿದವರು.
  ನಾನು ಬರೆದ `ದಲಿತ ಪೀಠಾಧಿಪತಿ' ಪುಸ್ತಕದಲ್ಲಿನ (ಫೆಬ್ರುವರಿ 2010 ರಂದು ಬಿಡುಗಡೆಯಾಗಿದೆ) ಕೆಲ ಭಾಗವನ್ನು ಇಲ್ಲಿ ಕೊಡಬೇಕು ಅಂದಾಗ ಇದೆಲ್ಲ ನೆನಪಿಗೆ ಬಂತು. ಪುಸ್ತಕದಲ್ಲಿನ ವಿಷಯ ಮುಂದಿನಂತಿದೆ.
     ದಲಿತ ಪೀಠಾಧಿಪತಿಯೇ ಏಕೆ?
             (ಲೇಖಕರ ನುಡಿ)
      ಶರಣ ಉರಿಲಿಂಗ ಪೆದ್ದಿಯವರು ಮಹಾ ಜ್ಞಾನಿಯಾಗಿದ್ದರು. ಶ್ರೇಷ್ಠ ವಚನಕಾರರಾಗಿ ಲೋಕಕ್ಕೆ ಅಮೂಲ್ಯ ಕೊಡುಗೆ ಕೊಟ್ಟಿದ್ದಾರೆ. ಅಸ್ಪೃಶ್ಯರಾಗಿ ಹುಟ್ಟಿದ ಕಾರಣ ಅವರು ಅನುಭವಿಸಿದ ಕಷ್ಟ ಕಾರ್ಪಣ್ಯಗಳಿಗೆ ಲೆಕ್ಕವಿಲ್ಲ. ಜಾತಿ ಆಧಾರದ ಮೇಲೆ ಸಮಾಜ ಬೆಲೆ ಕೊಡದಿದ್ದಾಗ ಜ್ಞಾನದ ಬಲದಿಂದ ವಿಶ್ವದ ಜ್ಯೋತಿಯಾಗಿ ಬೆಳಗಿದರು. ಗುರು ಉರಿಲಿಂಗ ದೇವರು ದೂರದಿಂದ ಎಸೆದ ಕಲ್ಲನ್ನೇ ಲಿಂಗವೆಂದು ಪೂಜಿಸಿದರು. ಏಕಲವ್ಯನು ಗುರು ದ್ರೋಣಾಚಾರ್ಯರ  ಮೂರ್ತಿ  ಮಾಡಿ ಅದರ ಎದುರಿಗೆ ಬಿಲ್ಲುವಿದ್ಯೆ ಕಲಿತಂತೆ ಇವರು  ಸತತ ಸಾಧನೆ ಮಾಡಿದರು. ಗುರುಗಳು ಸಿಟ್ಟಿನ ಭರದಲ್ಲಿ ಹೇಳಿದ `ಘೇ ದಗಡ ಜಾ' ಎಂಬ ಮಾತುಗಳನ್ನೇ ಮಂತ್ರವೆಂದು ಪಠಿಸಿ ಸಾಧನೆ ಕೈಗೊಂಡು ಸಿದ್ಧಿ ಪುರುಷರಾಗಿ ಬೆಳೆದರು.
   ಲಿಂಗ ದೀಕ್ಷೆ ಕೊಡಲು ಸಹ ಹಿಂದೇಟು ಹಾಕಿದ್ದ ಗುರುಗಳೇ ಮುಂದೆ 
ತಮ್ಮ ಮಠದ ಉತ್ತರಾಧಿಕಾರಿಯನ್ನಾಗಿ ಇವರನ್ನು ನೇಮಿಸುತ್ತಾರೆಂದರೆ 
ಇವರು ಯಾವ ಪರಿ ತಪಸ್ಸು ಮಾಡಿರಬೇಕು. ಕಬ್ಬಿಣ ಚಿನ್ನದ ಹೊಳಪನ್ನು ಪಡೆದು ಪ್ರಭೆಯನ್ನು ಬೀರಿದಂತಿತ್ತು ಇವರ ಸಾಧನೆ. ಇವರ ಬಗೆಗಿನ ಮಾಹಿತಿಯುಳ್ಳ 
ಕೃತಿಯೇ `ದಲಿತ ಪೀಠಾಧಿಪತಿ'. ಹಾಗೆ ನೋಡಿದರೆ 12 ನೇ ಶತಮಾನದ ಇತರೆ ಶರಣರಂತೆ ಉರಿಲಿಂಗ ಪೆದ್ದಿ ಅವರ ಬಗ್ಗೆಯೂ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. 
ಇದುವರೆಗೆ ಪ್ರಕಟವಾಗಿದಕ್ಕಿಂತ ಹೆಚ್ಚಿನದನ್ನು ಕೊಡುವ ಉದ್ದೇಶದಿಂದ ಅವರ ಕಾರ್ಯಕ್ಷೇತ್ರವಾಗಿದ್ದ ಕಂಧಾರ ಹಾಗೂ ಇತರೆಡೆ ಹೋಗಿ ಹುಡುಕಿದರೂ ಕೈಗೆ ಏನೂ ಬಂದಿಲ್ಲ. ದಾಖಲೆಗಳಿಲ್ಲದೆ ಕಲ್ಪನೆಯ ಆಧಾರದಲ್ಲಿ ಕತೆ ಕಟ್ಟುವುದು ಇಂಥ ವಿಷಯದಲ್ಲಿ ಸರಿಯಲ್ಲ. ಆದ್ದರಿಂದ ಇದ್ದಿರುವುದನ್ನೇ ಇಲ್ಲಿ ಪ್ರಸ್ತುತಪಡಿಸಲಾಗಿದೆ.
        ಆದರೆ ಶೂದ್ರ ವರ್ಣದ ಹುಟ್ಟು, ಜಾತಿ ನಿರ್ಮೂಲನೆಗೆ  ನಡೆದ ಇದುವರೆಗಿನ ಚಳವಳಿಗಳು, ಬೇಲೂರು ಉರಿಲಿಂಗ ಪೆದ್ದಿ ಮಠದ ಪರಂಪರೆಯ ಬಗ್ಗೆ ಮಾಹಿತಿ ಕೊಟ್ಟು ಪುಸ್ತಕ ವಿಶಿಷ್ಟವಾಗುವಂತೆ ಮಾಡಲು ಪ್ರಯತ್ನಿಸಲಾಗಿದೆ. ಇಂದಿನ ಆಧುನಿಕ ಯುಗದಲ್ಲೂ ದಲಿತರು ಮಠದ ಪೀಠಕ್ಕೆ ಏರುವುದು ಕನಸಿನ ಮಾತಾಗಿದೆ. ಹೀಗಿರುವಾಗ ಉರಿಲಿಂಗ ಪೆದ್ದಿಯವರು 12 ನೇ ಶತಮಾನದಲ್ಲಿಯೇ ಮಠಾಧೀಶರಾದದ್ದು ಒಂದು ಮಹಾಕ್ರಾಂತಿಯೇ ಸರಿ. ಮಠಾಧೀಶರಾಗುವುದೆಂದರೆ ಗುರುವಿನ ಸ್ಥಾನಕ್ಕೆ ಏರುವುದು. ಶೂದ್ರನಾಗಿ ಹುಟ್ಟಿದವನು ಗುರುವಾದರೆ ಜಾತಿಗೆ ಬೆಲೆ ಇರುತ್ತದೆಯೇ? ಆದ್ದರಿಂದ ಅಂದಿನ ಆ ಘಟನೆ ಎಲ್ಲರಿಗೂ ಪ್ರೇರಣಾದಾಯಕವಾಗಲಿ. ಸಮಾಜದಲ್ಲಿ ಸುಧಾರಣೆ ಬರಲಿ ಎಂಬ ಸದುದ್ದೇಶದಿಂದಲೇ ಪುಸ್ತಕಕ್ಕೆ `ದಲಿತ ಪೀಠಾಧಿಪತಿ' ಎಂದು ಹೆಸರಿಸಿ ಆ ಪ್ರಸಂಗವನ್ನು ಎತ್ತಿ ತೋರಿಸಲು ಯತ್ನಿಸಲಾಗಿದೆ.....
     ಶೂದ್ರ ವರ್ಣದ ಬಗ್ಗೆ ಸತ್ಯಾನ್ವೇಷಣೆ
         (ಮೊದಲ ಭಾಗ ಪು-1ರಿಂದ 6)
     ಹಿಂದೂ ಸಮಾಜ ವ್ಯವಸ್ಥೆಯಲ್ಲಿನ ವರ್ಣಾಶ್ರಮ ಪದ್ಧತಿ, ಲಿಂಗ ತಾರತಮ್ಯ ಮತ್ತು ಜಾತಿ ಪದ್ಧತಿ ನಿರ್ಮೂಲನೆಗೆ ಹಾಗೂ  ಡಂಬಾಚಾರ, ಮೂಢನಂಬಿಕೆ ತೊಡೆದು ಹಾಕಲು ನಡೆದ ಚಳವಳಿಗಳಿಗೆ ಲೆಕ್ಕವಿಲ್ಲ. ಸಮಾಜದ ಅವನತಿಗೆ ಕಾರಣವಾಗುವ ಇಂಥ ಅನಿಷ್ಟ ಪದ್ಧತಿಯನ್ನು  ಕಿತ್ತೊಗೆಯಲು ಬುದ್ಧ, ಬಸವಣ್ಣನವರ ಕಾಲದಿಂದ ಇದುವರೆಗೆ ಅನೇಕ ಮಹಾತ್ಮರು, ಸತ್ಪುರುಷರು, ಶರಣರು, ಸಂತರು ಪ್ರಯತ್ನಿಸಿದ್ದಾರೆ. ಆದರೂ ಇದರ ಬೇರುಗಳು  ಸಡಿಲಗೊಳ್ಳುತ್ತಿಲ್ಲ. ಶತಶತಮಾನಗಳಿಂದಲೂ ಅನೇಕರು ಇದಕ್ಕಾಗಿ ಹೆಣಗಾಡಿದರೂ ಈ ವ್ಯವಸ್ಥೆಯಲ್ಲಿ ಬದಲಾವಣೆ ಸಾಧ್ಯವಾಗುತ್ತಿಲ್ಲ ಏಕೆ ಎಂಬುದೇ ಎಲ್ಲರಿಗೂ ಕಾಡುತ್ತಿರುವ ಯಕ್ಷಪ್ರಶ್ನೆಯಾಗಿದೆ. ದಲಿತೋದ್ಧಾರಕರ ಸಾಲಿನಲ್ಲಿ ಅಗ್ರಗಣ್ಯರಾಗಿ ನಿಲ್ಲುವ ಡಾ.ಬಾಬಾಸಾಹೇಬ ಅಂಬೇಡ್ಕರ ಅವರಿಗೂ ಈ ಪ್ರಶ್ನೆ ಬೆಂಬಿಡದೆ ಕಾಡಿತ್ತು. ಅವರು ಈ ವ್ಯವಸ್ಥೆಯ ವಿರುದ್ಧ ಜೀವನಪರ್ಯಂತ ಹೋರಾಡಿದರು. ಜೊತೆಗೆ ವರ್ಣವ್ಯವಸ್ಥೆಯ ಹುಟ್ಟು, ವ್ಯಾಪಕತೆ ಮತ್ತು ದುಷ್ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಲು ಹೆಚ್ಚಿನ ಸಮಯ ವ್ಯಯಿಸಿದರು. ಸತತ ಅಧ್ಯಯನ ನಡೆಸಿ ಈ ಸಂಬಂಧ ಲೇಖನ, ಪ್ರಬಂಧ ರಚಿಸಿ ಜಾಗೃತಿಯ ಕಾರ್ಯವನ್ನು ಮಾಡಿದರು. ಅವರು ಜಾತಿ ಪದ್ಧತಿ ಬಗ್ಗೆ ಎಷ್ಟೊಂದು ಆಳವಾದ ಅಧ್ಯಯನ ನಡೆಸಿದ್ದರೆಂಬುದಕ್ಕೆ ಸಮಾಜವಾದಿ ಚಿಂತಕ ರಾಮ ಮನೋಹರ ಲೋಹಿಯಾ ಅವರು ತಮ್ಮ `ಮ್ಯಾನಕೈಂಡ್' ಪತ್ರಿಕೆಗೆ ಈ ಬಗ್ಗೆ ಲೇಖನ ಬರೆದು ಕಳುಹಿಸಲು ಪತ್ರ ಬರೆದು ಕೋರಿರುವುದೇ ಸಾಕ್ಷಿಯಾಗಿದೆ.
    `ದೇಶದಲ್ಲಿ ಪ್ರಚಲಿತವಿರುವ ಜಾತಿ ಪದ್ಧತಿಯ ಯಾವುದಾದರೂ ಒಂದು ಆಯಾಮವನ್ನು ನೀವು ಆಯ್ದುಕೊಂಡು ಭಾರತೀಯರು ಸಿಟ್ಟಿಗೇಳುವುದಷ್ಟೇ ಅಲ್ಲ: ಅವರು ದಂಗು ಬಡಿದು ಕುಳಿತುಕೊಳ್ಳುವಂತೆ ಮಾಡುವಂಥದೇನಾದರೂ ಬರೆಯಿರಿ ಎಂದು ಮನವಿ ಮಾಡಿಕೊಳ್ಳುತ್ತೇನೆ. ಕೋಪದೊಂದಿಗೆ ಸಹಾನುಭೂತಿಯೂ ಇರಲಿ ಎಂದು ಆಶಿಸುತ್ತೇನೆ' ಎಂಬುದು ಅವರ ಪತ್ರದ ಒಕ್ಕಣೆಯಾಗಿದೆ. ಇದರರ್ಥ ಜಾತಿ ವ್ಯವಸ್ಥೆಯ ಬಗ್ಗೆ ಡಾ.ಅಂಬೇಡ್ಕರ ಒಬ್ಬರೇ ಸಮರ್ಥವಾಗಿ ಹಾಗೂ ವಸ್ತುನಿಷ್ಠವಾಗಿ ವಿಷಯ ಮಂಡಿಸಬಲ್ಲರು ಎಂಬುದನ್ನು ಲೋಹಿಯಾ ಅಂಥವರಿಗೂ ಮನವರಿಕೆಯಾಗಿತ್ತು. ಜಾತಿ ವ್ಯವಸ್ಥೆ ಅಷ್ಟೇಅಲ್ಲ; ಯಾವುದೇ ವಿಷಯವನ್ನು ಅದರ ತಳವನ್ನು ಸ್ಪರ್ಷಿಸದೆ ಅವರು ಬರೆಯುತ್ತಿರಲಿಲ್ಲ.
ಡಾ.ಅಂಬೇಡ್ಕರರ ಸಂಶೋಧನೆ:
   ಜಾತಿ ವ್ಯವಸ್ಥೆಯ ಕುರಿತು ಶೂದ್ರರು ಯಾರು ? (ಹೂ ವೇರ ದಿ ಶೂದ್ರಾಸ್) ಎಂಬ ವಿಷಯ ಕುರಿತು ಡಾ.ಅಂಬೇಡ್ಕರ ಅವರು ಬರೆದ ಸಂಶೋಧನಾತ್ಮಕ ಮಹಾಪ್ರಬಂಧ ಈ ವಿಷಯದಲ್ಲಿನ ಒಂದು ಮಹೋನ್ನತ ಕೃತಿ. ಚತುರ್ವರ್ಣಗಳಲ್ಲಿ ನಾಲ್ಕನೆಯ ವರ್ಣದವರಾದ ಶೂದ್ರರನ್ನು ಸ್ವಾಭಿಮಾನಶೂನ್ಯ,  ನೀಚ ಕುಲದವರು ಎಂದು ಏಕೆ ತಿಳಿಯಲಾಯಿತು. ಅಸ್ಪೃಶ್ಯರೆಂದು ಇವರನ್ನು ಏಕೆ ಕಡೆಗಣಿಸಲಾಯಿತು ಎಂಬುದರ ಬಗ್ಗೆ ಅವರು ಸತತವಾಗಿ ಚಿಂತನೆಗೈದ ಫಲಶೃತಿಯೇ ಈ ಗ್ರಂಥ. ಇದರಲ್ಲಿ ಅಂಬೇಡ್ಕರ ಅವರ ವಿದ್ವತ್ತಿನ ದರ್ಶನವಾಗುತ್ತದೆ. ಅವರ ವ್ಯಾಸಂಗ ಎಷ್ಟೊಂದು ಆಳವಾಗಿತ್ತು ಎಂಬುದನ್ನು ತೋರಿಸಿ ಕೊಡುತ್ತದೆ. ಸಂಶೋಧನೆಯ ದೃಷ್ಟಿಯ ಪರಿಚಯ ಮಾಡುತ್ತದೆ ಎಂದು ಹಳೆಯ ತಲೆಮಾರಿನ ಪ್ರಸಿದ್ಧ ಲೇಖಕ ಧನಂಜಯ ಕೀರ ಅಭಿಪ್ರಾಯಪಟ್ಟಿದ್ದಾರೆ.
    ಸ್ವತಃ ದಲಿತರಾಗಿ ಹುಟ್ಟಿ ಹೆಜ್ಜೆ ಹೆಜ್ಜೆಗೂ ಮೇಲ್ವರ್ಗದವರಿಂದ ಅವಮಾನ ಸಹಿಸಿದ್ದ ಅಂಬೇಡ್ಕರ ಅವರು ವೇದ ಆಗಮಗಳ ಜಾಡು ಹಿಡಿದು ಶೂದ್ರರು ಅನಾದಿ ಕಾಲದಿಂದಲೂ ಇದ್ದರೆ ಎಂಬುದನ್ನು ತಿಳಿಯಲು ಯತ್ನಿಸಿದರು. ಈ ಬಗ್ಗೆ ಸತ್ಯಾನ್ವೇಷಣೆಗೆ ಮುಂದಾದರು. ತಮಗೆ ಗೊತ್ತಾಗಿರುವುದನ್ನು ಸಮಾಜದ ಎದುರಿಗಿಟ್ಟು ಜಾಗೃತಿ ತರುವುದೇ ಈ ಕಾರ್ಯದ ಹಿಂದಿನ ಉದ್ದೇಶವಾಗಿತ್ತು. ಅವರ ಈ ರೀತಿಯ ಪ್ರಯತ್ನಗಳಿಗೆ ಎದುರಾದ ಅಡ್ಡಿ ಆತಂಕಗಳು ಸಹ ಕಡಿಮೆಯೇನಲ್ಲ. ಅವರೇ ಪ್ರಬಂಧದ ಪ್ರಸ್ತಾವನೆಯಲ್ಲಿ ಸ್ಪಷ್ಟಪಡಿಸಿರುವಂತೆ ಕೆಲವರು ಅವರಿಗೆ ನೀವು ರಾಜಕೀಯದ ಬಗ್ಗೆ  ಮಾತಾಡಬಹುದು ಆದರೆ ಧರ್ಮ ಮತ್ತು ಜಾತಿ ಬಗ್ಗೆ ಹೇಳಲು ನಿಮಗೆ ಏನು ಅಧಿಕಾರವಿದೆ. ನಿಮಗೆ ಸಂಸ್ಕೃತ ಭಾಷೆಯ ಜ್ಞಾನವೇ ಇಲ್ಲ ಎಂದಾಗ ಇಂಥ ಪ್ರಯತ್ನಕ್ಕೆ ಕೈ ಹಾಕುವುದು ಸರಿ ಎನಿಸುವುದಿಲ್ಲ ಎಂದು ಬೆದರಿಕೆಯ ದಾಟಿಯಲ್ಲಿ ಕೇಳಿದ್ದರು.
     ಸಂಸ್ಕೃತ ಬರುವುದಿಲ್ಲ ಎಂದರೆ ನಾನು ಧರ್ಮದ ಬಗ್ಗೆ ಯೋಚಿಸಬಾರದೇ? ಯಾವುದೇ ವಿಷಯದ ಬಗ್ಗೆ ಯಾರಾದರೂ ಹತ್ತರಿಂದ ಹದಿನೈದು ವರ್ಷ ಅಧ್ಯಯನ ನಡೆಸಿದರೆ ಸಾಕು. ಅವರು ಆ ವಿಷಯದಲ್ಲಿ ಪಾಂಡಿತ್ಯ ಪಡೆದುಕೊಂಡರೆಂಬುದೇ ನನ್ನ ಭಾವನೆ. ಟೀಕಾಕಾರರು ಇದನ್ನು ತಿಳಿದುಕೊಳ್ಳಬೇಕು ಎಂದು ತಮ್ಮ ಬರವಣಿಗೆಯ ಮೂಲಕ ಚಾಟಿ ಏಟು ಕೊಟ್ಟರು. ಧರ್ಮದ ಆಳ ಅಗಲವನ್ನು ಕಂಡು ಹಿಡಿಯಲು ಹೊರಟಿರುವ ನನ್ನ ಪ್ರಯತ್ನ ಶೋಷಿತ ಜನಾಂಗದಲ್ಲಿ ಹೊಸ ವಿಚಾರ, ಹೊಸ ಕನಸುಗಳನ್ನು ಬಿತ್ತಲು ಸಫಲವಾದಿತು. ಪ್ರತಿಯೊಂದು ವಿಷಯದ ಸತ್ಯಾಸತ್ಯತೆಯನ್ನು ಕಂಡು ಹಿಡಿದು ಹೊಸ ದೃಷ್ಟಿಕೋನದಿಂದ ನೋಡಲು ಸಹಕಾರಿ ಆಗುವುದರಲ್ಲಿ ಸಂಶಯವಿಲ್ಲ ಎಂದು ಆತ್ಮವಿಶ್ವಾಸದಿಂದ ಹೇಳಿದರು.
ಶೂದ್ರರು ಕ್ಷತ್ರಿಯರಾಗಿದ್ದರೆ?:
    ಚತುರ್ವರ್ಣ ವ್ಯವಸ್ಥೆಯನ್ನು ಎತ್ತಿ ಹಿಡಿದ ಮನುವನ್ನು ಅಂಬೇಡ್ಕರರು ಹಿಂದು ಧರ್ಮದ ಶಿಲ್ಪಕಾರ ಎಂದು ಕರೆಯುತ್ತಾರೆ.  ಪುರುಷ ಸೂಕ್ತ ಎಂದು ಕರೆಯಲಾಗುವ ಋಗ್ವೇದದ ಹತ್ತನೆಯ ಮಂಡಲದಲ್ಲಿನ ತೊಂಭತ್ತನೆಯ ಋಕ್ಕುವಿನಲ್ಲಿ ಚತುರ್ವರ್ಣಗಳ ಬಗ್ಗೆ ಉಲ್ಲೇಖವಿದೆ. ಈ ಪುರುಷ ಸೂಕ್ತವನ್ನು ವಿಶ್ವದ ಉತ್ಪತ್ತಿ ಹೇಳುವ ಸಿದ್ಧಾಂತ ಎಂದೂ ಕರೆಯಲಾಗುತ್ತದೆ. ಧರ್ಮಕ್ಕೆ ವೇದ ಒಂದೇ ಆಧಾರ, ಇದರಲ್ಲಿನ ಸಿದ್ಧಾಂತವೇ ಸತ್ಯ. ಅದು ಪರಮೇಶ್ವರರು ಹೇಳಿದ ವಿಚಾರ ಎಂದು ಮನು ಹೇಳಿದ. ಮುಂದೆ ಸಮಾಜ ನಿಯಾಮಕರು ಸಹ ಇದನ್ನೇ ಎತ್ತಿ ಹಿಡಿಯುತ್ತಾರೆ. ಆಪಸ್ತಂಭ ಧರ್ಮಸೂತ್ರ ಮತ್ತು ವಶಿಷ್ಟ ಧರ್ಮಸೂತ್ರ ಹಾಗೂ ಯಜುರ್ವೆದದ  ಭಾಗಗಳಾದ ಶುಕ್ಲ ಯಜುರ್ವೆದದಲ್ಲಿನ ವಾಜಸನೆಯಿ ಸಂಹಿತೆಯಲ್ಲಿ ಶೂದ್ರರ ಉತ್ಪತ್ತಿ ಬಗ್ಗೆ ಮಂಡಿಸಲಾದ ಮೂರು ಸಿದ್ಧಾಂತಗಳಲ್ಲಿನ ಒಂದರಲ್ಲಿ ಪುರುಷ ಸೂಕ್ತದ ವಿಚಾರವನ್ನೇ ಹೇಳಲಾಗಿದೆ. ಕೃಷ್ಣ ಯಜುರ್ವೆದದಲ್ಲಿನ ತೈತರಿಯಾ ಸಂಹಿತೆಯಲ್ಲಿಯೂ ಅದನ್ನೇ ಉಲ್ಲೇಖಿಸಲಾಗಿದೆ. ಇದೆಲ್ಲವನ್ನು ಪರಾಮರ್ಷಿಸಿದ ನಂತರ ಡಾ.ಅಂಬೇಡ್ಕರ ಅವರು ಒಂದು ಮಹತ್ವದ ಸಿದ್ಧಾಂತ ಮಂಡಿಸುತ್ತಾರೆ. ಅದೆನೆಂದರೆ ಶೂದ್ರರು ಮೊದಲು ಕ್ಷತ್ರಿಯರಾಗಿದ್ದರು ಎಂಬುದು.
     ಮೂಲತಃ ವೇದಗಳಲ್ಲಿ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ ಈ ಮೂರೇ ವರ್ಣಗಳ ಬಗ್ಗೆ ಉಲ್ಲೇಖ ದೊರೆಯುತ್ತದೆ. ಆದ್ದರಿಂದ ಮೊದಲು ಶೂದ್ರ ವರ್ಣ ಅಸ್ತಿತ್ವದಲ್ಲಿಯೇ ಇರಲಿಲ್ಲ. ಪುರುಷ ಸೂಕ್ತದಲ್ಲಿ ನಂತರ ಅದನ್ನು ಸೇರ್ಪಡೆ ಮಾಡಲಾಗಿದೆ ಎಂದು ಅವರು ವಾದ ಮಂಡಿಸುತ್ತಾರೆ. ಕೆಲವರು ವೇದಗಳ ಕಾಲದಲ್ಲಿ ವರ್ಣ ವ್ಯವಸ್ಥೆಯೇ ಇರಲಿಲ್ಲ ಎಂದೂ ಹೇಳುತ್ತಾರೆ. ಆದರೆ ಅಂಬೇಡ್ಕರ ಅವರು ಇದನ್ನು ಒಪ್ಪುವುದಿಲ್ಲ. ಏಕೆಂದರೆ ಋಗ್ವೇದದಲ್ಲಿ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರ ಬಗ್ಗೆ ಅನೇಕ ಸಲ ಉಲ್ಲೇಖ ಬಂದಿದೆ. ಋಗ್ವೇದದಲ್ಲಿ ಬ್ರಾಹ್ಮಣ ಪದ 15 ಸಲ ಮತ್ತು ಕ್ಷತ್ರಿಯ ಪದ 9 ಸಲ ಉಪಯೋಗಿಸಲಾಗಿದೆ. ಆದರೆ ಶೂದ್ರ ಎಂಬ ಪದ ಒಮ್ಮೇಯೂ ಉಪಯೋಗಿಸಲಾಗಿಲ್ಲ ಎಂಬ ಪುರಾವೆ ಒದಗಿಸುತ್ತಾರೆ. ಶತಪಥ ಬ್ರಾಹ್ಮಣ ಮತ್ತು ತೈತೇರಿಯ ಬ್ರಾಹ್ಮಣ ಈ ಎರಡು ಬ್ರಾಹ್ಮಣ(ಗಳು)  ಗ್ರಂಥಗಳಲ್ಲಿಯೂ ಶೂದ್ರರ ಉಲ್ಲೇಖವಿಲ್ಲ. ಇವುಗಳಲ್ಲಿ ಮೂರು ವರ್ಣಗಳ ಉತ್ಪತ್ತಿ ಹೇಗಾಯಿತು ಎಂಬುದನ್ನು ಮಾತ್ರ ಹೇಳಲಾಗಿದೆ.
    ಅಂದಮೇಲೆ ಶೂದ್ರರು ಎಲ್ಲಿಂದ ಬಂದರು ಎಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತದೆ. ಇದಕ್ಕೆ ಅಂಬೇಡ್ಕರರು ಕಂಡುಕೊಂಡ ಉತ್ತರವೆಂದರೆ ಕ್ಷತ್ರಿಯರಲ್ಲಿ ಮತ್ತು ಬ್ರಾಹ್ಮಣರಲ್ಲಿ ಆಗಾಗ ಜಗಳಗಳಾಗುತ್ತಿದ್ದವು. ಅಂದು ಬ್ರಾಹ್ಮಣರಿಗೆ ವಿಶೇಷ ಸೌಲಭ್ಯಗಳಿದ್ದವು. ಉದಾ: ಬ್ರಾಹ್ಮಣರಿಗೆ ಪ್ರತಿಯೊಂದು ಕಾರ್ಯದಲ್ಲಿ ಮೊದಲ ಆದ್ಯತೆ ಕೊಡಬೇಕು. ಅವರಿಂದ ಯಾವುದೇ ರೀತಿಯ ತೆರಿಗೆ ಸಂಗ್ರಹಿಸಬಾರದು. ಒಂದುವೇಳೆ ಬ್ರಾಹ್ಮಣನಾದವನು ಪ್ರವಾಸದಲ್ಲಿದ್ದಾಗ ಆತನಿಗೆ ಹಸಿವೆಯಾಗಿ ಆತನು ಹೊಲದಲ್ಲಿನ ಕಬ್ಬು, ಶೇಂಗಾ ಅಥವಾ ಈರುಳ್ಳಿ ತೆಗೆದುಕೊಂಡರೆ ಅದನ್ನು ಅಪರಾಧ ಎಂದು ತಿಳಿದುಕೊಳ್ಳಬಾರದು. ಅಲ್ಲದೆ ಬ್ರಾಹ್ಮಣನು ಯಾವುದೇ ಸ್ತ್ರೀಯ ಜೊತೆಯಲ್ಲಿ ಮಾತನಾಡುತ್ತಿದ್ದರೆ ನಡುವೆ ಯಾರೂ ಅಡ್ಡಿಪಡಿಸಬಾರದು ಎಂಬ ನಿಯಮಗಳಿದ್ದವು.
   ಹೀಗಾಗಿ ಅವರ ದರ್ಪ ದೌರ್ಜನ್ಯ ಹೆಚ್ಚಾಗಿರಬೇಕು. ಆದ್ದರಿಂದ ಕ್ಷತ್ರಿಯರಲ್ಲಿ ಮತ್ತು ಇವರ ಮಧ್ಯೆ ಆಗಾಗ ಜಗಳ ನಡೆದ ಬಗ್ಗೆ ಮಾಹಿತಿ ದೊರೆಯುತ್ತದೆ. ಈ ಕಾರಣ ಬ್ರಾಹ್ಮಣರಲ್ಲಿ ಮತ್ತು ಕ್ಷತ್ರಿಯರಲ್ಲಿ ವೈರತ್ವ ಬೆಳೆಯುತ್ತದೆ. ಅದಕ್ಕಾಗಿ ಕ್ಷತ್ರಿಯರಿಗೆ ಉಪನಯನ ವಿಧಿ ಮಾಡಲು ಬ್ರಾಹ್ಮಣರು ನಿರಾಕರಿಸುತ್ತಾರೆ. ಹೀಗೆ ಉಪನಯನವಿಧಿಯಿಂದ ವಂಚಿತರಾದವರನ್ನೇ ಮುಂದೆ ಶೂದ್ರರೆಂದು ಕರೆಯಲಾಗುತ್ತದೆ. ಕಾಲಾನಂತರ ಶೂದ್ರ ಎಂಬುದು ಚತುರ್ಥ ವರ್ಣವಾಗಿ ಪರಿಗಣಿತವಾಗುತ್ತದೆ.
ಧಾರ್ಮಿಕ್ ಸಂಸ್ಕಾರ ನಿರಾಕರಣೆ:
     ಉಪನಯನವಿಧಿಯು ಮನುಷ್ಯನ ಸಂಸ್ಕಾರಗಳಲ್ಲಿ ಒಂದಾಗಿದೆ. ಗರ್ಭಾದಾನ, ಪುಂಸವನ, ಸಿಮಂತೋನ್ನಯನ, ಜಾತಕರ್ಮ, ನಾಮಕರ್ಮ, ಅನ್ನಪಾಶಣ, ಕೌಲ, ಉಪನಯನ, ಸಮವರ್ತನ, ವಿವಾಹ, ಪಂಚಮಹಾಯಜ್ಞ,  ಸಪ್ತ ಪಾಕಯಜ್ಞ, ಸಪ್ತ ಸಾಮಯಜ್ಞ ಇವು ಪ್ರಮುಖ ಸಂಸ್ಕಾರಗಳಾಗಿವೆ. ಹಾಗೆ ನೋಡಿದರೆ ಸಂಸ್ಕಾರಗಳಿಗೆ ಸಮಾಜದಲ್ಲಿ ಬಹಳಷ್ಟು ಮಹತ್ವವಿದೆ. ಸಂಸ್ಕಾರದಿಂದಲೇ ಮನುಷ್ಯನ ಯೋಗ್ಯತೆ ಅಳೆಯುವ ಕಾಲವೊಂದಿತ್ತು. ಸಂಸ್ಕಾರವಿಲ್ಲದ ಮನುಷ್ಯ ಯಜ್ಞ ನಡೆಸಲು ಪಾತ್ರನಾಗುವುದಿಲ್ಲ. ಒಂದುವೇಳೆ ಹಾಗೆಯೇ ಯಜ್ಞ ನಡೆಸಿದರೆ ಆತ ಉತ್ತಮ ಫಲಗಳಿಗೆ ಪಾತ್ರನಾಗುವುದಿಲ್ಲ ಎಂಬ ನಂಬಿಕೆ ಇದೆ. ಹೀಗಾಗಿ ಉಪನಯನ ಸಂಸ್ಕಾರದ ಹಕ್ಕನ್ನು ಕಸಿದುಕೊಂಡ ಕಾರಣ ಶೂದ್ರರಿಗೆ ಸಹಜವಾಗಿಯೇ ಸಮಾಜದಲ್ಲಿ ಕೆಳಗಿನ ದರ್ಜೆ ಪ್ರಾಪ್ತವಾಯಿತು. ಒಂದುವೇಳೆ ಕ್ಷತ್ರಿಯರಾದವರು 11 ನೇ ವರ್ಷಕ್ಕೆ ಉಪನಯನ ವಿಧಿ ಪೋರೈಸದಿದ್ದರೆ ಮುಂದೆ ರಾಜ್ಯಾಭಿಷೇಕ ಮಾಡಿಕೊಳ್ಳಲು ಸಹ ಬರುವುದಿಲ್ಲ ಎಂಬ ನಿಯಮವಿತ್ತು. ಆದ್ದರಿಂದ ಬಹಳಷ್ಟು ಅರಸರಿಗೆ ಪಟ್ಟಾಭಿಷೇಕದ ಸಮಯದಲ್ಲಿ ತೊಂದರೆಯಾಯಿತು. ಒಟ್ಟಾರೆ ಕ್ಷತ್ರಿಯರಿಗೆ ಹೀನ ಸ್ಥಾನ ಪ್ರಾಪ್ತವಾಗಿ ನಾಲ್ಕನೆಯ ಶೂದ್ರ ವರ್ಣ ಅಸ್ತಿತ್ವಕ್ಕೆ ಬಂತು ಎಂದು ಡಾ.ಬಾಬಾಸಾಹೇಬ್ ಅಂಬೇಡ್ಕರ ಅವರು ಅಂತಿಮ ನಿರ್ಣಯಕ್ಕೆ ಬರುತ್ತಾರೆ.
    ಬರಬರುತ್ತಾ  ಶೂದ್ರರ ಮತ್ತು ಇತರೆ  ವರ್ಣಿಯರ್   ಮಧ್ಯದ ಕಂದಕ ಹೆಚ್ಚಾಗುತ್ತಾ ಹೋಗುತ್ತದೆ. ವ್ಯಕ್ತಿಯ ಗುಣ, ಚಾರಿತ್ರ್ಯ ಮತ್ತು ಕಾರ್ಯ ಕೌಶಲ್ಯತೆಗಳಕ್ಕಿಂತ ಆಕಸ್ಮಿಕ ಹುಟ್ಟೇ ಆತನ ಸಾಮಾಜಿಕ ಸ್ಥಾನಮಾನ ನಿರ್ಧರಿಸುವ ಅಳತೆಗೋಲಾಗಿ ಪರಿಣಮಿಸುತ್ತದೆ. ಹೀಗಾಗಿ  ಬ್ರಾಹ್ಮಣರು ಮತ್ತು ಕ್ಷತ್ರಿಯರು ವಿಶೇಷ ಸ್ಥಾನಮಾನ ಪಡೆದರೆ ಶೂದ್ರರು ಸಾಮಾಜಿಕ, ಆರ್ಥಿಕ್ , ಧಾರ್ಮಿಕ್  ಮತ್ತು ರಾಜಕೀಯವಾಗಿ ಅಧಃಪತನಕ್ಕೊಳಗಾಗಿ ಅತ್ಯಂತ ಶೋಚನೀಯ ಸ್ಥಿತಿಗೆ ತಲುಪುತ್ತಾರೆ. ಇಂದಿಗೂ ಈ ಸ್ಥಿತಿಯಲ್ಲಿ ಬದಲಾವಣೆ ಸಾಧ್ಯವಾಗಿಲ್ಲ.
ರಾಜಕಾರಣಿಗಳ ನಿರಾಸಕ್ತಿ:
     ಪ್ರಗತಿಪ್ರಿಯರಿಗೆ ಹಾಗೂ ತುಳಿತಕ್ಕೊಳಗಾದವರಿಗೆ ರಾಜಕೀಯ ಸ್ಥಾನಮಾನ ಪಡೆಯುವುದಕ್ಕಿಂತಲೂ ಸಮಾಜ ಸುಧಾರಣೆ ಮಹತ್ವದ್ದು ಎನಿಸುತ್ತದೆ. ಆದರೆ ರಾಜಕೀಯವಾಗಿ ಜಾಗೃತರಾದವರಿಗೆ ಸಮಾಜ ಸುಧಾರಣೆಗಿಂತ ಕುರ್ಚಿ  ಪಡೆಯುವುದೇ ಮುಖ್ಯವಾಗುತ್ತದೆ. ಆದ್ದರಿಂದ ಇಂಥ ವಿಷಯಗಳಿಗೆ ಅವರು ಹೆಚ್ಚಿನ ಮಹತ್ವ ಕೊಡುವುದಿಲ್ಲ. ಈ ರೀತಿಯ ಸಮಸ್ಯೆಗಳನ್ನು ಬಿಡಿಸಲು ಮುಂದಾದರೆ ಜನತೆ ತನ್ನನ್ನು ಇಷ್ಟಪಡುವುದಿಲ್ಲ ಎಂಬ ಭಾವನೆ ಇವರದ್ದಾಗಿರುತ್ತದೆ. ಆದ್ದರಿಂದ ಸಮಾಜ ಸುಧಾರಣೆಯ ಪ್ರಶ್ನೆ ಬಂದಾಗ ಇಂಥವರು ಜಾರಿಕೆಯ ಮಾರ್ಗ ಹಿಡಿಯುತ್ತಾರೆ. ಇಲ್ಲವೆ ವಿಳಂಬ ಧೋರಣೆ ಅನುಸರಿಸುವ ಜಾಣ್ಮೆ ತೋರುತ್ತಾರೆ ಎಂಬುದು ಬಾಬಾಸಾಹೇಬರ ಅಭಿಪ್ರಾಯವಾಗಿದೆ. ಶೂದ್ರ ವರ್ಣ ಹೇಗೆ ಹುಟ್ಟಿತು ಎಂಬುದನ್ನು ಕಂಡುಕೊಂಡ ಅಂಬೇಡ್ಕರ ಅವರಿಗೆ  ಹಿಂದು ಧರ್ಮದಿಂದ ಜಾತಿಯ ಭೂತ ಓಡಿಸಲಾಗುವುದಿಲ್ಲ ಎಂಬ ಸತ್ಯದ ಅರಿವೂ ಆಗಿತ್ತು. ಆದ್ದರಿಂದಲೇ ಅವರು ಬೌದ್ಧ ಧರ್ಮದೆಡೆಗೆ ಮುಖ ಮಾಡಿದರು ಎನ್ನಬಹುದು.
   ಶರಣ ಉರಿಲಿಂಗ ಪೆದ್ದಿ 
(ಭಾಗ5, ಪುಟ- 32ರಿಂದ 42)
    ಉರಿಲಿಂಗ ಪೆದ್ದಿಯವರದ್ದು ಶರಣಗಣದಲ್ಲಿಯೇ ಎದ್ದು ನಿಲ್ಲುವಂತಹ ವಿಶಿಷ್ಟ ವ್ಯಕ್ತಿತ್ವ.  ಅಸ್ಪೃಶ್ಯ ಜಾತಿಗೆ ಸೇರಿದ್ದರೂ ಆಚಾರ್ಯಪದವಿಗೇರಿದವರು, ಸತತ ಸಾಧನೆ, ಗುರುವಿನಲ್ಲಿನ ಅಚಲ ನಿಷ್ಠೆಯ ಮೂಲಕ ಪಾಂಡಿತ್ಯವನ್ನು ಗಳಿಸಿದ್ದರು. ಅವರು ಕಂಧಾರದ ನಲ್ಲೂರ ಮಠದ ಪೀಠಾಧಿಪತಿಯಾಗಿ ನೇಮಕಗೊಂಡದ್ದು ಮಹಾಕ್ರಾಂತಿಯೇ ಸರಿ. ಉಪನಯನ ಮಾಡಿಕೊಳ್ಳದ ಹಾಗೂ ಅಸ್ಪೃಶ್ಯರಾದವರಿಗೆ ವೇದಾಧ್ಯಯನ ಹಾಗೂ ಸಂಸ್ಕೃತ ಕಲಿಯಲು ಅವಕಾಶ ಇಲ್ಲ. ಶೂದ್ರನು ವೇದವನ್ನು ಓದಿದರೆ ಕಿವಿಗೆ ಕಾದ ಸೀಸವನ್ನು ಹಾಕಬೇಕು. ನುಡಿದರೆ ನಾಲಿಗೆ ಕತ್ತರಿಸಬೇಕು. ಜ್ಞಾಪಕವಿಟ್ಟುಕೊಂಡರೆ ಕೊಂದು ಹಾಕಬೇಕು ಎನ್ನುವ ನಿಯಮವಿದ್ದ ಕಾಲದಲ್ಲಿ ಸಂಸ್ಕೃತ ಕಲಿತು, ವೇದಾಗಮಗಳ ಅಧ್ಯಯನ ನಡೆಸಿರುವುದು ಅವರ ದಿಟ್ಟ ನಿರ್ಧಾರ್  ಮತ್ತು ಗಟ್ಟಿ ಮನಸ್ಸಿನ ಪ್ರತೀಕವಾಗಿದೆ. ಅವರು ರಚಿಸಿದ ಅನುಭವಪೂರ್ಣವಾದ ವಚನಗಳು ಅವರ ಅಸಾಧಾರಣ ಪಾಂಡಿತ್ಯಕ್ಕೆ ಸಾಕ್ಷಿಯಾಗಿವೆ.
    ಬಸವಣ್ಣನವರು ಹಿಂದುಳಿದ ಜಾತಿಯ ಅಲ್ಲಮಪ್ರಭುದೇವರಿಗೆ ಅನುಭವ ಮಂಟಪದ ಶೂನ್ಯ ಪೀಠವನ್ನು ವಹಿಸುತ್ತಾರೆ.  ಅಸ್ಪೃಶ್ಯರನ್ನು ಒಂದೆಡೆ ಸೇರಿಸಿ ಅವರನ್ನು ಶರಣರನ್ನಾಗಿ ಮಾಡುತ್ತಾರೆ. ಬ್ರಾಹ್ಮಣ ಮತ್ತು ಅಸ್ಪೃಶ್ಯ ಜಾತಿಯ ವಧು-ವರರ ಮದುವೆ ಮಾಡಿಸುತ್ತಾರೆ. ಬಸವಣ್ಣನ ಈ ಕ್ರಾಂತಿಗೆ ಓಗೊಟ್ಟು ದೂರದೂರದವರು ಆಗಮಿಸುತ್ತಾರೆ. ಸಮಾನತೆಯ ತಳಹದಿಯ ಭಕ್ತಿ ಸಾಮ್ರಾಜ್ಯ ಕಟ್ಟುವ ಅವರ ಪ್ರಯತ್ನದ ಫಲವಾಗಿ ಕಲ್ಯಾಣದ ತುಂಬ ಶರಣರೇ ಕಾಣುತ್ತಾರೆ. ಉರಿಲಿಂಗ ಪೆದ್ದಿ ಹಾಗೂ ಅವರ ಗುರುಗಳಾಗಿದ್ದ ಉರಿಲಿಂಗ ದೇವರು ಸಹ ಇಲ್ಲಿಗೆ ಬಂದು ಹೋಗುತ್ತಾರೆ ಎನ್ನಲಾಗುತ್ತದೆ. ಆದರೆ ಇದಕ್ಕೆ ಬಲವಾದ ಆಧಾರಗಳಿಲ್ಲ. ಆದರೂ ಈ ಗುರು- ಶಿಷ್ಯರು ಜಾತಿ ವ್ಯವಸ್ಥೆ ಹೊಡೆದೊಡಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡುತ್ತಾರೆ ಎಂಬುದಂತು ನಿಸ್ಸಂಶಯ. ಉರಿಲಿಂಗ ದೇವರು ಅಸ್ಪೃಶ್ಯನಾದ ಪೆದ್ದಣ್ಣನಿಗೆ ಲಿಂಗದೀಕ್ಷೆ ಕೊಟ್ಟು ಗುರುಪೀಠವನ್ನು ವಹಿಸಿರುವುದು ಮಹಾಕ್ರಾಂತಿಯೇ ಸರಿ. ಮಠದ ಉತ್ತರಾಧಿಕಾರಿ ನೇಮಕದ ವಿಷಯದಲ್ಲಿ ಸಂಪ್ರದಾಯವನ್ನು ಲೆಕ್ಕಿಸದೆ ತೆಗೆದುಕೊಂಡ ಈ ಕ್ರಾಂತಿಕಾರಿ ನಿರ್ಣಯದ ಹಿಂದೆ ಬಸವಣ್ಣನವರ ಪ್ರೇರಣೆ ಕೆಲಸ ಮಾಡಿದೆ. ಆದರೆ ಸಮಾಜದ ವ್ಯವಸ್ಥೆಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ನಡೆಸಿದ ಈ ಮಹಾಪ್ರಯೋಗಕ್ಕೆ ಅಷ್ಟಾಗಿ ಮಹತ್ವ ದೊರೆಯದಿರುವುದು  ದುರ್ದೈವದ  ಸಂಗತಿ......
      ಉರಿಲಿಂಗ ಪೆದ್ದಿಯವರ ಮೂಲ ಹೆಸರು ಪೆದ್ದಣ್ಣ ಎನ್ನುವುದು. ತೆಲುಗು ಭಾಷೆಯಲ್ಲಿ ಪೆದ್ದಣ್ಣ ಎಂದರೆ ದೊಡ್ಡಣ್ಣ ಎಂದರ್ಥ. ಇಂದಿನ ಆಂಧ್ರಪ್ರದೇಶದಿಂದ ಕಂಧಾರಕ್ಕೆ ಬಂದು ವಾಸವಾಗಿದ್ದರು. ಮನೆಯಲ್ಲಿ ಕಿತ್ತುತಿನ್ನುವ ಬಡತನ. ಜೊತೆಗೆ ಕಾಯಕ ಮಾಡದೆ ಕುಳಿತು ತಿನ್ನುವ ಪ್ರವೃತ್ತಿ ಬೆಳೆದಿದ್ದರಿಂದ ಕೆಲ ಸಲ ಕಳ್ಳತನ ಮಾಡುವ ಅನಿವಾರ್ಯ ಪರಿಸ್ಥಿತಿ ಬರುತ್ತದೆ. ಹೀಗೆ ಕಳ್ಳತನ ಮಾಡಲು ಹೋದಾಗಲೇ ಮನೆಯೊಂದರಲ್ಲಿ ಗುರುಗಳಾದ ಉರಿಲಿಂಗ ದೇವರು ಸೂರಯ್ಯ ಎನ್ನುವ ಭಕ್ತನಿಗೆ ಲಿಂಗದೀಕ್ಷೆ ಕೊಡುವುದು ಗೋಚರಿಸುತ್ತದೆ. ಮೊದಲೇ ಅಸ್ಪೃಶ್ಯ ಜಾತಿಯಲ್ಲಿ ಹುಟ್ಟಿದ್ದರಿಂದ ದೇವರು, ಗುರು, ಪೂಜೆ, ದೀಕ್ಷೆ ಏನೇನೂ ಗೊತ್ತಿರುವುದಿಲ್ಲ. ಆದ್ದರಿಂದ ದೀಕ್ಷೆ ಕೊಡುವುದನ್ನು ಮಾಳಿಗೆಯ ಬೆಳಕಿಂಡಿಯಿಂದ ಆಸಕ್ತಿಯಿಂದ ವೀಕ್ಷಿಸುತ್ತಾನೆ. ಅದನ್ನು ನೋಡಿ ಆತನಲ್ಲಿ ಭಕ್ತಿಭಾವ ಹುಟ್ಟುತ್ತದೆ. ತಾನೂ ಲಿಂಗದೀಕ್ಷೆ ಪಡೆಯಬೇಕು. ಕಳ್ಳತನ ಮಾಡದೆ ಸತ್ಯನಿಷ್ಠನಾಗಿ ಕಾಯಕ ಮಾಡಬೇಕು  ಎಂಬ ಬಯಕೆ ಮನಸ್ಸಿನಲ್ಲಿ ಮೊಳಕೆಯೊಡೆಯುತ್ತದೆ. ಆದರೆ ಈ ಬಗ್ಗೆ ಗುರುಗಳ ಎದುರಿಗೆ ಹೋಗಿ ಕೇಳಲು ಧೈರ್ಯ ಸಾಲುವುದಿಲ್ಲ. ಆದರೂ ಹೇಗಾದರೂ ಮಾಡಿ ದೀಕ್ಷೆ ಪಡೆಯಲೇ ಬೇಕು ಎಂಬ ಗಟ್ಟಿ ನಿರ್ಧಾರ್  ಮಾಡುತ್ತಾನೆ. ಹೆಂಡತಿಯಾದ ಕಾಳವ್ವೆ ಇಂಥ ಆಸೆ ಇಟ್ಟುಕೊಳ್ಳುವುದು ಆಕಾಶದಿಂದ ನಕ್ಷತ್ರಗಳನ್ನು ಕಿತ್ತು ತರುತ್ತೇನೆ ಎಂದು ಜಂಭ ಕೊಚ್ಚಿಕೊಂಡಂತೆಯೇ ಸರಿ ಎನ್ನುತ್ತಾಳೆ.
    ಆದರೂ ಛಲ ಬಿಡುವುದಿಲ್ಲ. ಹೇಗಾದರೂ ಮಾಡಿ ಗುರುಗಳ ಪ್ರೀತಿ ಸಂಪಾದಿಸಬೇಕು ಎಂದು ರಾತ್ರಿ ಹಗಲು ಯೋಚಿಸಿ ಒಂದು ನಿರ್ಧಾರಕ್ಕೆ  ಬರುತ್ತಾನೆ.  ಅರಣ್ಯದಿಂದ ಕಟ್ಟಿಗೆಗಳನ್ನು ಕಡಿದು ತಂದು ಪ್ರತಿದಿನ ನಸುಕಿನಲ್ಲಿ ಮಠದ ಎದುರು ಹಾಕುತ್ತಾನೆ. ಹೀಗೆ ದಿನವೂ ಮಠದ ಎದುರಿಗೆ ಕಟ್ಟಿಗೆಗಳ ಹೊರೆಗಳು ಬೀಳುತ್ತಿರುವುದನ್ನು ಕಂಡು ಉರಿಲಿಂಗ ದೇವರಿಗೆ ಆಶ್ಚರ್ಯವಾಗುತ್ತದೆ. ಈ ಬಗ್ಗೆ ಮಠದಲ್ಲಿದ್ದವರಿಗೆ ವಿಚಾರಿಸಿದರೆ ತಮಗೆ ಗೊತ್ತಿಲ್ಲ ಎಂಬ ಉತ್ತರ ದೊರೆಯುತ್ತದೆ. ಇದೇನು ಮಾಟ ಮಂತ್ರವೋ ಅಥವಾ ಯಾರಾದರೂ ಭಕ್ತರು ಸಲ್ಲಿಸುತ್ತಿರುವ ಸೇವೆಯೋ ನೋಡೋಣ ಎಂದು ಉರಿಲಿಂಗ ದೇವರು ಒಂದು ದಿನ ರಾತ್ರಿ ಹೊಂಚು ಹಾಕಿ ಕುಳಿತು ಕೊಳ್ಳುತ್ತಾರೆ.
    ಕಟ್ಟಿಗೆಯ ಹೊರೆ ಧೊಪ್ಪೆಂದು ಮಠದ ಎದುರಿಗೆ ಬೀಳುತ್ತಿದ್ದಂತೆಯೇ ಯಾರು ನೀನು ? ಯಾರಿಗೂ ಗೊತ್ತಿಲ್ಲದೆ ಕಟ್ಟಿಗೆಯನ್ನು ಏಕೆ ತರುತ್ತಿರುವೆ ಎಂದು ಪ್ರಶ್ನಿಸುತ್ತಾರೆ. ಅಂದು ರಾತ್ರಿ ಸೂರಯ್ಯನ ಮನೆಯಲ್ಲಿ ನೋಡಿದ ಗುರುಗಳೇ ಸಾಕ್ಷಾತ ಎದುರಿಗೆ ಬಂದು ನಿಂತಿರುವುದನ್ನು ನೋಡಿ ಪೆದ್ದಣ್ಣನಿಗೆ ಗಲಿಬಿಲಿಯಾಗುತ್ತದೆ. ಗುರುಗಳಿಗೆ ತಮ್ಮ ಸೇವೆ ಸರಿ ಎನಿಸಿದೆಯೋ ಇಲ್ಲವೋ? ಅವರು ಏನನ್ನುತ್ತಾರೋ ಎಂದು ಗಾಬರಿಗೊಳ್ಳುತ್ತಾನೆ. ದೂರದಿಂದಲೇ ಸಾಷ್ಟಾಂಗ ನಮಸ್ಕಾರ ಮಾಡಿ ಏನೂ ಮಾತಾಡದೆ ನಿಂತಿರುವುದನ್ನು ಕಂಡು ಗುರುಗಳು ಅವನ ಹತ್ತಿರ ಹೋಗಿ ಆತ್ಮೀಯತೆಯಿಂದ ಎಲ್ಲವನ್ನೂ ವಿಚಾರಿಸುತ್ತಾರೆ. ಆಗ ಪೆದ್ದಣ್ಣ ತಮ್ಮ ದರ್ಶನ ಹಾಗೂ ತಮ್ಮಿಂದ ಲಿಂಗದೀಕ್ಷೆ ಪಡೆಯುವ ಉದ್ದೇಶದಿಂದ ತಾವು ಹೀಗೆ ಮಾಡಿರುವುದಾಗಿ ತಿಳಿಸುತ್ತಾನೆ. ಆದರೆ ಗುರುಗಳು ಸಚ್ಚ್ಯಾರಿತ್ರ್ಯವಂತನಾಗದ ಹೊರತು ಲಿಂಗದೀಕ್ಷೆ ಪಡೆಯುವುದು ಸಾಧ್ಯವಿಲ್ಲ. ಬೇಕಾದರೆ ಕಟ್ಟಿಗೆ ಹಾಕಿದಕ್ಕೆ ಕೂಲಿ ಹಣ ತೆಗೆದುಕೊಂಡು ಹೋಗು ಎಂದು ಹೇಳುತ್ತಾರೆ. ಆದರೆ ಪೆದ್ದಣ್ಣ ಹಣ ತೆಗೆದುಕೊಳ್ಳಲು ನಿರಾಕರಿಸುತ್ತಾನೆ. ಅಲ್ಲದೆ ತಮ್ಮ ಸೇವೆಯನ್ನು ಮುಂದುವರೆಸುತ್ತಾನೆ.
      ಉರಿಲಿಂಗ ದೇವರು ಎದುರಿಗೆ ಸಿಕ್ಕಾಗಲೊಮ್ಮೆ  ತಮಗೆ ದೀಕ್ಷೆ ಕೊಡಲು ಕೇಳಿಕೊಳ್ಳುತ್ತಾನೆ. ಈ ಕಾರಣ ಒಂದು ದಿನ ಸಿಟ್ಟಿನಿಂದ ಕಲ್ಲೋಂದನ್ನು ಎತ್ತಿ ಕೊಟ್ಟು `ಘೇ ದಗಡ ಜಾ' (ಕಲ್ಲು ತೆಗೆದುಕೊಂಡು ಹೋಗು) ಎಂದು ಕಳುಹಿಸುತ್ತಾರೆ. ಆದರೂ ಪೆದ್ದಣ್ಣ ಸ್ವಲ್ಪವೂ ವಿಚಲಿತನಾಗದೆ ಆ ಕಲ್ಲನ್ನು ಎತ್ತಿಕೊಂಡು ಮನೆಗೆ ತಂದು ಲಿಂಗವೆಂದು ತಿಳಿದು ಪ್ರತಿದಿನ ಭಕ್ತಿಯಿಂದ ಪೂಜಿಸುತ್ತಾನೆ. ಏಕಲವ್ಯನು ಗುರು ದ್ರೋಣಾಚಾರ್ಯರ ಮೂರ್ತಿಯನ್ನು ಮಾಡಿ ಪೂಜಿಸಿ ಅದರ ಎದುರಿಗೆ ವಿದ್ಯೆ ಕಲಿತಂತೆ ಪೆದ್ದಿಯೂ ಸತತ ಸಾಧನೆ ಮಾಡುತ್ತಾನೆ. `ಘೇ ದಗಡ ಜಾ' ಎನ್ನುವುದನ್ನು ಗುರುಮಂತ್ರವೆಂದು ತಿಳಿದು ನಿತ್ಯ ಪಠಿಸುತ್ತಾನೆ. ಸತ್ಯ ನಿಷ್ಠೆಯಿಂದ ಕಟ್ಟಿಗೆ ಮಾರುವ ಕಾಯಕ ಕೈಗೊಂಡು ಬದುಕುತ್ತಾನೆ. ಅವನ ಸಾಧನೆಯ ಬಗ್ಗೆ ಗುರು ಉರಿಲಿಂಗ ದೇವರಿಗೂ ಸುದ್ದಿ ಮುಟ್ಟುತ್ತದೆ.
   ಆ ಸಮಯದಲ್ಲಿ ಕಂಧಾರದಲ್ಲಿ ನಂದರಾಜನು ಕೆರೆಯೊಂದನ್ನು ಕಟ್ಟಿಸುತ್ತಾನೆ. ಆದರೆ ಎಷ್ಟು ಅಗೆದರೂ ನೀರು ಬರುವುದಿಲ್ಲ. ಆದ್ದರಿಂದ ಈ ಬಗ್ಗೆ ವಿಚಾರಿಸಲು ಕೆರೆ ಮಧ್ಯದ ದೊಡ್ಡ ಬಂಡೆಗಲ್ಲನ್ನು ತೆಗೆದರೆ ನೀರು ಚಿಮ್ಮುತ್ತದೆ ಎಂದು ಕೆಲವರು ಹೇಳುತ್ತಾರೆ. ಆಗ ನಂದರಾಜರು ಈ ವಿಷಯದ ಬಗ್ಗೆ ಗುರು ಉರಿಲಿಂಗ ದೇವರ ಜೊತೆ ಚರ್ಚಿಸಿದಾಗ ಅವರು ಉರಿಲಿಂಗ ಪೆದ್ದಿಯನ್ನು ಈ ಕೆಲಸಕ್ಕಾಗಿ ಕರೆಸುತ್ತಾರೆ. ಆಗ ಆತ `ಘೇ ದಗಡ ಜಾ' ಎನ್ನುವ ಮಂತ್ರವನ್ನೇ ಹೇಳಿ ಬಂಡೆಗಲ್ಲನ್ನು ತೆಗೆದು ನೀರು ಚಿಮ್ಮುವಂತೆ ಮಾಡುತ್ತಾನೆ. ಪೆದ್ದಿಯವರ ಸಾಧನೆಯಿಂದ ಗುರುಗಳು ಹಾಗೂ ರಾಜನು ಸಂತುಷ್ಟಗೊಳ್ಳುತ್ತಾರೆ. ಎಲ್ಲೆಲ್ಲೂ ಜೈಕಾರ ಮೊಳಗುತ್ತದೆ. ಪೆದ್ದಿಯ ಕೀರ್ತಿ  ಎಲ್ಲೆಡೆ ಹರಡುತ್ತದೆ. ತನ್ನ ಶಿಷ್ಯನ ಭಕ್ತಿ, ನಿಷ್ಠೆ, ಸಾಧನೆ ಕಂಡು ಉರಿಲಿಂಗ ದೇವರಿಗೆ ಅಪಾರ ಸಂತಸವಾಗುತ್ತದೆ. ಅವನನ್ನು ಉರಿಲಿಂಗ ಪೆದ್ದಿ ಎಂದು ನಾಮಕರಣ ಮಾಡಿ ನಲ್ಲೂರ ಮಠದ ಅಧಿಕಾರವನ್ನು ವಹಿಸುತ್ತಾರೆ.....
      ಆದರೆ ವಿಪರ್ಯಾಸದ ಸಂಗತಿಯೆಂದರೆ ಅಸ್ಪೃಶ್ಯನಾಗಿದ್ದ ಉರಿಲಿಂಗ ಪೆದ್ದಿಯನ್ನು ಪೀಠಕ್ಕೆ ನೇಮಿಸಿದ್ದರಿಂದ ಸಮಾಜದಲ್ಲಿ ಅಶಾಂತಿ ಭುಗಿಲೇಳುತ್ತದೆ. ಸಂಪ್ರದಾಯವಾದಿಗಳು ನಲ್ಲೂರು ಮಠಕ್ಕೆ ಬೆಂಕಿ ಹಚ್ಚುತ್ತಾರೆ ಎಂದು ತಿಳಿದು ಬರುತ್ತದೆ. ಕಲ್ಯಾಣದಲ್ಲಿ ಬಸವಣ್ಣನವರು ಎದುರಿಸಿದಂತೆಯೇ  ಕಂಧಾರದಲ್ಲಿಯೂ ಗುರು- ಶಿಷ್ಯರಿಬ್ಬರೂ ಘೋರ ಪರಿಣಾಮ ಎದುರಿಸಿರುವ ಸಾಧ್ಯತೆ ಇದೆ. ಉರಿಲಿಂಗ ಪೆದ್ದಿಯವರು ಪೀಠಾಧಿಕಾರಿ ಆಗುವವರೆಗಿನ ವಿಷಯ ಉತ್ತರ ದೇಶದ ಬಸವಲಿಂಗ ಕೃತ ಭೈರವೇಶ್ವರ ಕಾವ್ಯದ ಕಥಾ ಸಾಗರ, ಶಾಂತಲಿಂಗ ದೇಶಿಕನ ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರ, ಅದೃಶ್ಯ ಕವಿಯ ಪ್ರೌಢದೇವರಾಯನ ಕಾವ್ಯ, ಮಹಾಲಿಂಗ ದೇವನ ಏಕೋತ್ತರ ಶತಸ್ಥಲ ಮೊದಲಾದ ಕಾವ್ಯಗಳಲ್ಲಿ ಬರುತ್ತದೆ. ಆದರೆ ಪೆದ್ದಿಯನ್ನು ಪೀಠಕ್ಕೆ ನೇಮಿಸಿದ ನಂತರ ಮಠಕ್ಕೆ ಬೆಂಕಿ ಹಚ್ಚಿದ ಘಟನೆ ಬಿಟ್ಟರೆ ಕಂಧಾರದಲ್ಲಿ ಉದ್ಭವಿಸಿದ ಪರಿಸ್ಥಿತಿಯ ಬಗ್ಗೆ ಹೆಚ್ಚಿನ ವಿವರ ಲಭ್ಯವಾಗುವುದಿಲ್ಲ. ಅಲ್ಲದೆ ನಂತರದ ಕಾಲದಲ್ಲಿಯೂ ಈ ಬಗ್ಗೆ ಸಂಶೋಧಕರು ಮೌನವನ್ನೇ ತಾಳಿರುವುದು ಕಂಡು ಬರುತ್ತದೆ.
    ಹೀಗಾಗಿ ಉರಿಲಿಂಗ ಪೆದ್ದಿ ಎಷ್ಟು ದಿನಗಳವರೆಗೆ ಮಠದಲ್ಲಿ ಉಳಿಯುತ್ತಾರೆ. ಎಂಥ ಪರಿಸ್ಥಿತಿಗೆ ಸಿಲುಕುತ್ತಾರೆ ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಆದರೂ ಈ ಸಂದರ್ಭದಲ್ಲಿ ಸಂಪ್ರದಾಯವಾದಿಗಳು ಉರಿಲಿಂಗ ಪೆದ್ದಿ ಅವರಿಗೆ ಕಿರುಕುಳ ಕೊಡುತ್ತಾರೆ. ಅದನ್ನು ತಾಳದೆ ಅವರು ಮಠವನ್ನು ತ್ಯಜಿಸಿ ಕಲ್ಯಾಣದೆಡೆಗೆ ಪ್ರಯಾಣ ಬೆಳೆಸುತ್ತಾರೆ. ಇಲ್ಲಿಯೇ ಲಿಂಗೈಕ್ಯರಾಗುತ್ತಾರೆ. ಅವರ ಸಮಾಧಿ ಸ್ಥಳ ಕಲ್ಯಾಣದಲ್ಲಿಯೇ ಇದೆ ಎಂಬ ವಿಷಯ ಕೆಲವು ಗ್ರಂಥಗಳಲ್ಲಿ ಉಲ್ಲೇಖಗೊಂಡಿದೆ.....
     ಪೆದ್ದಿಯವರು  ಪಾಂಡಿತ್ಯಪೂರ್ಣ ವಚನಗಳನ್ನು ರಚಿಸಿರುವುದಲ್ಲದೆ ಅವುಗಳಲ್ಲಿ ಸಂಸ್ಕೃತದ ಶ್ಲೋಕಗಳನ್ನು ಹೇರಳವಾಗಿ ಬಳಸಿಕೊಂಡಿದ್ದಾರೆ. ಮಠಾಧೀಶರಾದ ನಂತರವೇ ಅವರು ಕನ್ನಡ ಮತ್ತು ಸಂಸ್ಕೃತ ಭಾಷೆ ಕಲಿತು ವೇದ ಉಪನಿಷತ್ತುಗಳನ್ನು ಅಭ್ಯಸಿಸಿ ಇಷ್ಟೇಲ್ಲ ವಚನಗಳನ್ನು ರಚಿಸಿದರು ಎಂದು ಹೇಳಲಾಗುತ್ತದೆ. ಒಂದುವೇಳೆ ಹೀಗೆಯೇ ಆಗಿದ್ದರೆ ಅವರು ಎಂಥ ಕಠೋರ ಸಾಧನೆ ಕೈಗೊಂಡಿರಬೇಕು. ಅವರಲ್ಲಿ ಎಂಥ ಪ್ರತಿಭೆ ಇರಬೇಕು ಎಂಬುದನ್ನು ಊಹಿಸುವುದು ಸಹ ಕಷ್ಟವಾಗುತ್ತದೆ. ಕೆಲ ವಿದ್ವಾಂಸರು ಅವರಲ್ಲಿ ಮೊದಲೇ ಪಾಂಡಿತ್ಯವಿದ್ದರೂ ಅಸ್ಪೃಶ್ಯನಾಗಿದ್ದರಿಂದ ಯಾರೂ ಲಕ್ಷ ಕೊಡಲಿಕ್ಕಿಲ್ಲ. ಕಟ್ಟಿಗೆ ಮಾರುವ ಕಾಯಕವನ್ನು ನಿಷ್ಠೆಯಿಂದ ಮಾಡುತ್ತಿದ್ದರೂ ಲಿಂಗದೀಕ್ಷೆ ಕೊಡಲು ಯಾರೂ ಮುಂದಾಗಲಿಕ್ಕಿಲ್ಲ. ಅದಕ್ಕಾಗಿಯೇ ಸೂರಯ್ಯನ ಮನೆಯಲ್ಲಿನ ದೀಕ್ಷಾ ಕಾರ್ಯವನ್ನು ಅವನು ಕಳ್ಳತನದಿಂದ ನೋಡಿರಬೇಕು ಎಂದು ಅಭಿಪ್ರಾಯಪಡುತ್ತಾರೆ. ಈ ಒಂದೇ ಕಾರಣಕ್ಕಾಗಿ ಅವನಿಗೆ ಕಳ್ಳ ಎಂಬ ಹಣೆಪಟ್ಟಿ ಹಚ್ಚಿರುವ ಸಾಧ್ಯತೆಯೂ ಇದೆ.
       ಅವರ ಕಾರ್ಯಕ್ಷೇತ್ರದ ಬಗ್ಗೆಯೂ ವಿದ್ವಾಂಸರು ಭಿನ್ನಾಭಿಪ್ರಾಯ ಹೊಂದಿದ್ದಾರೆ. ಅವರು ಇಂದಿನ ನಾಂದೇಡ ಜಿಲ್ಲೆಯ ಕಂಧಾರದವರು ಎಂದು ಬಹಳಷ್ಟು ಕಡೆ ಉಲ್ಲೇಖಗೊಂಡಿದೆ. ಆದರೆ ಕೆಲವರು ಬಿಜಾಪುರ ಜಿಲ್ಲೆಯ ನಂದವಾಡಗಿ ಅವರ ಮೂಲ ಸ್ಥಳ ಎಂದೂ ಅಭಿಪ್ರಾಯಪಟ್ಟಿದ್ದಾರೆ. ಅವರು ಜೀವಿಸಿದ್ದ ಕಾಲಮಾನದ ಬಗ್ಗೆಯೂ ವಿದ್ವಾಂಸರಲ್ಲಿ ಒಮ್ಮತವಿಲ್ಲ. ಸಾಮಾನ್ಯವಾಗಿ ಬಸವಣ್ಣನವರ ಸಮಕಾಲೀನರು ಎಂಬುದು ಎಲ್ಲರ ತಿಳಿವಳಿಕೆಯಾಗಿದೆ. ಆದರೆ ಕೆಲವರು ಅವರು 14ನೇ ಶತಮಾನದಲ್ಲಿದ್ದರು ಎಂದೂ ಹೇಳುತ್ತಾರೆ. ಶರಣ ಸಾಹಿತಿ ಬಿ.ಮಹಾದೇವಪ್ಪ ಅವರಂತೂ ಇವೆರಡರಕ್ಕಿಂತ ಭಿನ್ನವಾದ ವಾದ ಮಂಡಿಸುತ್ತಾರೆ. ಕಲ್ಯಾಣದಲ್ಲಿ ಬಸವಣ್ಣನವರು ಬ್ರಾಹ್ಮಣ ಮಧುವರಸ ಮತ್ತು ಸಮಗಾರ ಹರಳಯ್ಯನ ನಡುವೆ ನೆಂಟಸ್ತನ ಏರ್ಪಡಿಸುವ ಪೂರ್ವದಲ್ಲಿಯೇ ಕಂಧಾರದಲ್ಲಿ ಉರಿಲಿಂಗ ದೇವರು ಹುಟ್ಟು ಅಸ್ಪೃಶ್ಯರಾಗಿದ್ದ ಪೆದ್ದಣ್ಣನವರನ್ನು ಜಂಗಮ ಸ್ಥಲಕ್ಕೆ ಏರಿಸಿದ್ದರು ಎಂದು ಅವರು `ಅರಿವು ಆಚಾರ' ಗ್ರಂಥದಲ್ಲಿ ದಾಖಲಿಸಿದ್ದಾರೆ. ಏನಿದ್ದರೂ ಈ ಬಗ್ಗೆ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ.
   ಕಂಧಾರದ ಸರ್ವಲೋಕಾಶ್ರಯ ಮಂಟಪ:
      ಉರಿಲಿಂಗ ಪೆದ್ದಿಯವರ ಕಾರ್ಯಕ್ಷೇತ್ರವಾಗಿತ್ತು ಎನ್ನಲಾಗುವ ಕಂಧಾರ ಇಂದು ನಾಂದೇಡ ಜಿಲ್ಲೆಯ ತಾಲ್ಲೂಕು ಸ್ಥಳವಾಗಿದೆ. ಜಿಲ್ಲಾ ಕೇಂದ್ರದಿಂದ ಪಶ್ಚಿಮಕ್ಕೆ 60 ಕಿ.ಮೀ ಅಂತರದಲ್ಲಿದೆ. ಸದ್ಯ ಇಲ್ಲಿ ಉರಿಲಿಂಗ ಪೆದ್ದಿಯವರಿಗೆ ಹಾಗೂ ಉರಿಲಿಂಗ ದೇವರಿಗೆ ಸಂಬಂಧಿಸಿದ ಯಾವುದೇ ಕುರುಹುಗಳಿಲ್ಲ. ಪಟ್ಟಣದ ಮಧ್ಯದಲ್ಲಿನ ಹಾಜಿಸಯ್ಯಾ ದರ್ಗಾ  ಮೊದಲು ನಲ್ಲೂರು ಮಠ ಆಗಿತ್ತು ಎಂದು ಹೇಳಲಾಗುತ್ತದೆ. ಆದರೂ ಈ ಬಗ್ಗೆ ಪುರಾವೆಗಳು ದೊರೆಯುವುದಿಲ್ಲ. ಪಟ್ಟಣದ ಉತ್ತರ ದಿಕ್ಕಿಗೆ ಬೃಹತ್ತಾದ ಕೆರೆ ಇದೆ. ಆದರೆ ಅದರಲ್ಲಿ ಉರಿಲಿಂಗ ಪೆದ್ದಿಯವರು ನೀರು ಚಿಮ್ಮಿಸಿದ್ದರು ಎಂಬುದಕ್ಕೆ ಆಧಾರಗಳು ಲಭ್ಯವಿಲ್ಲ. ಇಲ್ಲಿ ಅತ್ಯಂತ ಪುರಾತನವಾದ ಕೋಟೆ ಮಾತ್ರ ಇದ್ದು ಈ ಸ್ಥಳ ಐತಿಹಾಸಿಕವಾಗಿ ಮಹತ್ವ ಪಡೆದಿದೆ ಎಂಬುದಕ್ಕೆ ಸಾಕ್ಷಿಯಾಗಿ ನಿಂತಿದೆ.
       ಕಂಧಾರದಲ್ಲಿ ಕ್ರಿ.ಶ.939-967 ರಲ್ಲಿ ರಾಷ್ಟ್ರಕೂಟರ 3 ನೇ ಕೃಷ್ಣನು ಆಳ್ವಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ಇಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಆದ್ದರಿಂದ ಅವನಿಗೆ `ಕಂಧಾರಪುರವರಾಧೀಶ' ಹಾಗೂ `ಕಂಧಾರದೇವ'ಎಂಬ ಬಿರುದು ಕೊಡಲಾಗಿತ್ತು. ಆತನ ಕಾಲದಲ್ಲಿ ಇಲ್ಲಿ `ಸರ್ವಲೋಕಾಶ್ರಯ ಮಂಟಪ' ನಿರ್ಮಾಣ ಮಾಡಲಾಗುತ್ತದೆ ಎಂದು ಮಹಾರಾಷ್ಟ್ರ  ಸರ್ಕಾರ್ ದ ಮಾಹಿತಿ ನಿರ್ದೆಶನಾಲಯದ ದಾಖಲೆಗಳಿಂದ ತಿಳಿದು ಬರುತ್ತದೆ. ಈ ಮಂಟಪ ಕಲ್ಯಾಣದ ಅನುಭವ ಮಂಟಪದಂತೆಯೇ ಇತ್ತೇ?  ಮಂಟಪದಲ್ಲಿ ಏನು ನಡೆಯುತ್ತಿತ್ತು. ಅದನ್ನು 
ಏತಕ್ಕಾಗಿ ನಿರ್ಮಿಸಲಾಗಿತ್ತು ಎಂಬುದರ ಬಗ್ಗೆ ವಿವರ ಮಾತ್ರ ಲಭ್ಯವಾಗುವುದಿಲ್ಲ. ಪಟ್ಟಣದಲ್ಲಿ `ಜಂಗತುಂಗ ಸಮುದ್ರ' ಎಂಬ ಬೃಹತ್ ಕೆರೆ, ವೀರ ನಾರಾಯಣ ಗುಡಿ, ಲಂಡಿಗೇಶ್ವರ, ಸೋಮನಾಥ ಮಂದಿರಗಳು ಸಹ ಈ ಕಾಲದಲ್ಲಿಯೇ ನಿರ್ಮಾಣವಾಗುತ್ತವೆ. ಅಂದು ನಂದವಾಡಗಿ ಅಥವಾ ನಂದಿತಟ್ ಎಂದು ಕರೆಯಲಾಗುತ್ತಿದ್ದ ಇಂದಿನ ನಾಂದೇಡ ಸಹ ರಾಷ್ಟ್ರಕೂಟರ ಹಾಗೂ ಚಾಲುಕ್ಯರ ಆಳ್ವಿಕೆಗೆ ಒಳಪಟ್ಟಿತ್ತು. ಇಲ್ಲಿ ಮೊದಲು ನಂದರು, ನಂತರ ಮೌರ್ಯರು, ರಾಷ್ಟ್ರಕೂಟರು ಹಾಗೂ ಚಾಲುಕ್ಯರು ಆಳ್ವಿಕೆ ನಡೆಸಿದ್ದಾರೆ. ಚಾಲುಕ್ಯರ ನಂದದೇವನ ಕಾಲದಲ್ಲಿಯೂ ಕೆಲ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂಬುದು ದಾಖಲೆಗಳಿಂದ ತಿಳಿದು ಬರುತ್ತದೆ.
 ಬೇಲೂರ ಪೆದ್ದಿ ಮಠ ಮತ್ತು ಪರಂಪರೆ 
(ಭಾಗ 6 43 ರಿಂದ 51)
             ಬೇಲೂರ ಗ್ರಾಮಕ್ಕೆ ಮಹತ್ವ ಬರಲು ಭಿಲ್ಲೇಶ ಬೊಮ್ಮಯ್ಯನ ಗುಡಿಯಂತೆಯೇ ದಲಿತ ಶರಣ ಉರಿಲಿಂಗ ಪೆದ್ದಿ ಅವರ ಮಠವೂ ಕಾರಣವಾಗಿದೆ. ಈ ಗ್ರಾಮ ಈಗ ಗ್ರಾಮ ಪಂಚಾಯತ್ ಕೇಂದ್ರವಾಗಿದೆ. ಇಲ್ಲಿ  ಸರ್ಕಾರಿ  ಪ್ರೌಢಶಾಲೆ ಹಾಗೂ ಖಾಸಗಿ ಶಾಲೆಗಳು ಸಹ ಇದ್ದು ಈಚೆಗೆ ಶೈಕ್ಷಣಿಕ ಕೇಂದ್ರವಾಗಿ ಬೆಳೆದಿದೆ. ಇಲ್ಲಿಂದ ಪೂರ್ವಕ್ಕೆ ಚುಳಕಿನಾಲಾ ಜಲಾಶಯದ ರಸ್ತೆಯಲ್ಲಿ ಉರಿಲಿಂಗಪೆದ್ದಿ ಅವರ ಮಠವಿದೆ. ಮಠದ ಸುತ್ತಲೂ ಮೊದಲು ಪರಿಶಿಷ್ಟ ಜಾತಿಯವರ ಮನೆಗಳಿದ್ದವು. ಕೆಲ ವರ್ಷಗಳ ಹಿಂದೆ ಇಲ್ಲಿಯ ಮನೆಗಳು ಗ್ರಾಮದ ಪಶ್ಚಿಮಕ್ಕೆ ಸ್ಥಳಾಂತರಗೊಂಡವು. ಈ ಕಾರಣ ಇಲ್ಲಿನ ಹಳೆಯ ಕಟ್ಟಡಗಳು ಹಾಳು ಬಿದ್ದಿವೆ. ಇಂಥ ಮನೆಗಳ ಕಲ್ಲು ಮಣ್ಣಿನ ರಾಶಿಯ ನಡುವೆ ಮಠದ ಮಂಟಪ ಮಾತ್ರ ಎದ್ದು ಕಾಣುತ್ತದೆ. ಸುತ್ತಲೂ ಹೊಲಗಳಿದ್ದು ನಿರ್ಜನ ಪ್ರದೇಶವಾಗಿರುವ ಕಾರಣ ವಿಶೇಷ ಸಂದರ್ಭಗಳಲ್ಲಿ ಮಾತ್ರ ಭಕ್ತರು ಮಠಕ್ಕೆ ಭೇಟಿ ಕೊಡುತ್ತಾರೆ.
    ಬಸವಕಲ್ಯಾಣ ಹಾಗೂ ಸುತ್ತಮುತ್ತಲಿನ ಸ್ಥಳಗಳಲ್ಲಿನ ಬಸವಾದಿ ಶರಣರಿಗೆ ಸಂಬಂಧಿಸಿದ ಸ್ಮಾರಕಗಳು ಇತ್ತೀಚಿನವರೆಗೆ ಕತ್ತಲಲ್ಲಿಯೇ ಇದ್ದವು. ಸಂಪೂರ್ಣವಾಗಿ ಹಾಳಾಗಿರುವ ಇವುಗಳನ್ನು ಪುನಃ ಗುರುತಿಸಿ ಅಭಿವೃದ್ಧಿಪಡಿಸುವ ಕೆಲಸವನ್ನು ಸಂಘ ಸಂಸ್ಥೆಗಳು ಮತ್ತು  ಸರ್ಕಾರ್  ಈಚೆಗೆ  ಕೈಗೆತ್ತಿಕೊಂಡಿದೆ. ಇದರಂತೆ ಬೇಲೂರಿನ ಉರಿಲಿಂಗ ಪೆದ್ದಿ ಮಠ ಸಹ ಮಠಾಧಿಪತಿಗಳ ಮತ್ತು ಗ್ರಾಮಸ್ಥರ ಪ್ರಯತ್ನ ಹಾಗೂ ಭಕ್ತರ ಸಹಕಾರದಿಂದಾಗಿ ಈಚೆಗೆ ಅಭಿವೃದ್ಧಿ ಕಾಣುತ್ತಿದೆ.
      ಹಾಗೆ ನೋಡಿದರೆ ಕರ್ನಾಟಕ್ ದಲ್ಲಿ ಉರಿಲಿಂಗ ಪೆದ್ದಿ ಮಠಗಳು ಬಹಳಷ್ಟಿವೆ. ಇವೆಲ್ಲ ಮಠಗಳು ಶಕ್ತ್ಯಾನುಸಾರ ಉರಿಲಿಂಗ ಪೆದ್ದಿ ಶರಣರ ಬಗ್ಗೆ ಪ್ರಚಾರ ಕೈಗೊಂಡು ಶರಣ ಸಂಸ್ಕೃತಿಯನ್ನು ಮುಂದುವರೆಸಿಕೊಂಡು ಹೋಗುತ್ತಿವೆ. ಇವುಗಳಲ್ಲಿ ಕೆಲವು ಮನೆಗಳಂತಿದ್ದರೆ ಇನ್ನು ಕೆಲವು ಮಠಗಳು ದೊಡ್ಡ ದೇವಾಲಯಗಳಂತಿದ್ದು ಅವುಗಳಿಗೆ ಸಾಕಷ್ಟು ಆಸ್ತಿಯೂ ಇದೆ. ಗುಲ್ಬರ್ಗ ಜಿಲ್ಲೆಯ ಕೊಡ್ಲಾ, ಗುಂಡಗುರ್ತಿ,ಟೆಂಗಳಗಿ, ಹೊನಕುಂಟಾ, ಹುರಸಗುಂಡಗಿ, ಯಾದಗಿರಿ, ಬೀದರ ಜಿಲ್ಲೆಯ ಬೇಲೂರು, ಬೇಮಳಖೇಡ್, ಭಾಲ್ಕಿ, ಖಟಕಚಿಂಚೋಳಿ, ಗೋರಟಾ, ಮುಚಳಂಬ, ಪ್ರತಾಪುರ, ತ್ರಿಪುರಾಂತ, ಬಸವಕಲ್ಯಾಣ, ಗೋಧಿ ಹಿಪ್ಪರ್ಗಾ , ಘಾಟಬೋರೋಳ, ಮೈಸೂರು ಜಿಲ್ಲೆಯ ಮಲ್ಕುಂಟಿ, ನಂಜನಗೂಡು, ಮೈಸೂರು, ಎಂ.ಕನ್ನೇನಹಳ್ಳಿ, ಮಾರನಹಳ್ಳಿ, ಬೆಂಕಿಪುರ, ಲಕ್ಷ್ಮಿಪುರ, ಮಡಕುತೊರೆ, ಕಾಳಿಗುಂಡಿ, ಮರಡಿಪುರ, ಚಾಮರಾಜನಗರ ಜಿಲ್ಲೆಯ ಮಣಗಳ್ಳಿ, ಸತ್ಯಗಾಲ, ಕುನಹಳ್ಳಿ, ನರಿಪುರ, ಹುಡಿಗಾಲ, ಯಾಲಕ್ಕೂರು, ಶ್ರೀರಾಮಪುರ, ದಡದಳ್ಳಿ, ಮಂಡ್ಯ ಜಿಲ್ಲೆಯ ಬೆಳಕವಾಡಿ, ಮಂಡ್ಯ, ಅಲಸಳ್ಳಿ,  ಹಾಸನ ಜಿಲ್ಲೆಯ ಜೋಗಿಪುರಗಳಲ್ಲಿ ಮಠಗಳಿವೆ. ಈ ಬಗ್ಗೆ ಡಾ.ಸಾಹುಕಾರ ಎಸ್.ಕಾಂಬಳೆ ಅವರು `ಲಿಂಗಾಯತ ಅಸ್ಪೃಶ್ಯರು ಒಂದು ಅಧ್ಯಯನ'ಎನ್ನುವ ಮಹಾಪ್ರಬಂಧ ರಚಿಸಿ ಡಾಕ್ಟರೇಟ್ ಪಡೆದಿದ್ದಾರಲ್ಲದೆ ಈ ಮಠಗಳನ್ನು ಬೆಳಕಿಗೆ ತರುವ ಪ್ರಯತ್ನ ಮಾಡಿದ್ದಾರೆ.
     ಮೊದಲೇ ತಿಳಿಸಿರುವಂತೆ ಉರಿಲಿಂಗ ಪೆದ್ದಿ ಶರಣರ ಮೂಲ ಸ್ಥಳದ ಬಗ್ಗೆ ವಿದ್ವಾಂಸರು ಭಿನ್ನಾಭಿಪ್ರಾಯ ಹೊಂದಿದ್ದಾರೆ. ಮಹಾರಾಷ್ಟ್ರದ ಇಂದಿನ ನಾಂದೇಡ ಜಿಲ್ಲೆಯ ಕಂಧಾರ ಅವರ ಹುಟ್ಟೂರು ಎಂಬುದು ಹೆಚ್ಚಿನವರ ಅಭಿಪ್ರಾಯವಾಗಿದೆ. ಆದರೆ  ಬಿಜಾಪುರ ಜಿಲ್ಲೆಯ ನಂದವಾಡಗಿ ಅವರ ಮೂಲ ಸ್ಥಳ ಎಂದೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಅವರ ಕಾಲಮಾನದ ಬಗ್ಗೆಯೂ ಖಚಿತ ನಿಲುವು ತಾಳಲು ಯಾವುದೇ ಆಧಾರಗಳಿಲ್ಲ. ಅದರಂತೆ ಅವರ ಜೀವನದ ಘಟನೆಗಳ ಬಗ್ಗೆಯೂ ಹೆಚ್ಚಿನ ವಿವರ ಲಭ್ಯವಿಲ್ಲ. ಉರಿಲಿಂಗ ಪೆದ್ದಿಯವರು ಕಂಧಾರದಲ್ಲಿನ ನಲ್ಲೂರು ಮಠದ ಅಧಿಪತಿಯಾಗಿ ಎಷ್ಟು ದಿನ ಉಳಿಯುತ್ತಾರೆ. ಎಂಥ ಪರಿಸ್ಥಿತಿ ಎದುರಿಸುತ್ತಾರೆ  ಎಂಬುದರ ಬಗ್ಗೆ ನಿಖರವಾದ ಮಾಹಿತಿ ದೊರೆಯುವುದಿಲ್ಲ. ಆದರೂ ದಲಿತ ಪೆದ್ದಣ್ಣನಿಗೆ ಪೀಠವನ್ನು ವಹಿಸಿದ ಕಾರಣಕ್ಕಾಗಿ ಉರಿಲಿಂಗ ದೇವರು ಮೇಲ್ವರ್ಗದವರ ಕೆಂಗಣ್ಣಿಗೆ ಗುರಿಯಾಗಿ ತೊಂದರೆಗೆ ಸಿಲುಕಿಕೊಳ್ಳುತ್ತಾರೆ. ಉರಿಲಿಂಗಪೆದ್ದಿ ಸಹ ಜನರ ಕಿರುಕುಳ ತಾಳದೆ ಮಠವನ್ನು ತ್ಯಜಿಸುತ್ತಾರೆ ಎಂಬುದು ಕೆಲವರ ಊಹೆಯಾಗಿದೆ. ಶರಣರ ಕಾರ್ಯಕ್ಷೇತ್ರಕ್ಕ್ಕೆ ಹೋಗದೆ ಗತ್ಯಂತರವಿಲ್ಲ ಎಂಬುದನ್ನು  ತಿಳಿದು ಅವರು ಕಲ್ಯಾಣಕ್ಕೆ ಬಂದಿರಬಹುದು ಎನ್ನಲಾಗುತ್ತದೆ.
   ಹೀಗೆ ಬಸವಣ್ಣನ ಸಾನಿಧ್ಯವನ್ನು ಬಯಸಿ ಕಲ್ಯಾಣಕ್ಕೆ ಆಗಮಿಸಿದ ಅವರು ಇಲ್ಲಿಂದ 10 ಕಿ.ಮೀ ದೂರದಲ್ಲಿರುವ ಇಂದು ಬೇಲೂರು ಗ್ರಾಮವಿರುವ ಸ್ಥಳದಲ್ಲಿ ವಾಸ್ತವ್ಯ ಹೂಡುತ್ತಾರೆ ಎನ್ನಲಾಗುತ್ತದೆ. ಕೆಲವು ಗ್ರಂಥಗಳಲ್ಲಿ ಕಲ್ಯಾಣದ ಸಮೀಪದಲ್ಲಿಯೇ ಪೆದ್ದಿಯವರ ಸಮಾಧಿ ಇದೆ ಎಂಬುದು ದಾಖಲಾಗಿದೆ. ಬೇಲೂರ ಮಠವನ್ನು ಬಿಟ್ಟರೆ ಬಸವಕಲ್ಯಾಣದ ಭೀಮನಗರ ಓಣಿಯಲ್ಲಿ ಮಾತ್ರ ಅವರ ಗವಿ ಆಕಾರದ ಮಂದಿರವಿದೆ. ಇವೆರಡರಲ್ಲಿ ಯಾವುದಾದರೊಂದು ಸ್ಥಳದಲ್ಲಿ ಸಮಾಧಿ(ಗದ್ದುಗೆ) ಇರುವ ಸಾಧ್ಯತೆ ಇದೆ.
    ಬೇಲೂರನಲ್ಲಿ ಅಂದು ಅವರು ವಾಸಿಸಿದ ಸ್ಥಳವೇ ಮುಂದೆ ಮಠವಾಗಿ ರೂಪುಗೊಂಡಿದೆ. ಅಲ್ಲದೆ ಮಠಕ್ಕೆ ಮಠಾಧಿಪತಿಗಳನ್ನು ನೇಮಿಸುವ ಪರಂಪರೆ ಬೆಳೆದು ಬಂದಿದೆ. ಇದುವರೆಗೆ ಶ್ರೀ ಶಿವಲಿಂಗ ಸ್ವಾಮಿ, ಶ್ರೀ ಶಾಂತವೀರ ಸ್ವಾಮಿ, ಶ್ರೀ ಭಾನುದಾಸ ಸ್ವಾಮಿ, ಶ್ರೀ ಶಣ್ಮುಖ ಸ್ವಾಮಿ, ಶ್ರೀ ಗೋಣಯ್ಯ  ಸ್ವಾಮಿ, ಶ್ರೀ ಶಿವಲಿಂಗೇಶ್ವರ ಶಿವಯೋಗಿ, ಶ್ರೀ ಮಹಾದೇವ ಸ್ವಾಮಿ, ಶ್ರೀ ಶಿವಯೋಗಿ ಸ್ವಾಮಿ, ಶ್ರೀ ಬಸವಂತ ಸ್ವಾಮಿ ಒಳಗೊಂಡು 13ಜನ ಸ್ವಾಮಿಗಳು ಪೀಠವನ್ನು ಅಲಂಕರಿಸಿದ್ದಾರೆ. 2001ರಲ್ಲಿ ಇಂದಿನ ಮಠಾಧಿಪತಿಗಳಾದ ಶ್ರೀ ಪಂಚಾಕ್ಷರಿ ಸ್ವಾಮಿಯವರು ಅಧಿಕಾರ ವಹಿಸಿಕೊಂಡರು.
    ಉರಿಲಿಂಗ ಪೆದ್ದಿಯವರ ಮೂಲಸ್ಥಳವಾದ ಕಂಧಾರದವರಾದ ವಗ್ಗೆ (ವಾಘಮಾರೆ) ಕುಟುಂಬದವರು ನೂರಾರು ವರ್ಷಗಳ ಹಿಂದೆಯೇ ಬೇಲೂರಿಗೆ ಬಂದು ವಾಸವಾಗಿದ್ದಾರೆ. ಮುಲ್ಲಾ ಮಸಟಕಿ, ತುಕಾರಾಮ, ಗೀರೆಪ್ಪ, ತುಕನಾಕ, ಗುಂಡಾಜಿ, ಮುಲ್ಲಾ ಜಟಿಂಗ್, ಸೈದಪ್ಪ, ವಿಠ್ಠಲ್, ಕಲ್ಲಪ್ಪ ಅವರು ಈ ಮನೆತನದ ಐದಾರು ತಲೆ ಮಾರಿನ ಪ್ರಮುಖರಾಗಿದ್ದಾರೆ. ಇವರು ಇಲ್ಲಿ `ಕಂಧಾರದೇವಿ'ಯ ಚಿಕ್ಕ ಮಂದಿರವನ್ನೂ ನಿರ್ಮಿಸಿದ್ದಾರೆ. ಉರಿಲಿಂಗ ಪೆದ್ದಿಯವರ ಭಕ್ತರಾಗಿರುವಂತೆ ಇವರು ಕಂಧಾರ ದೇವಿಯ ಆರಾಧಕರು ಸಹ ಆಗಿದ್ದಾರೆ. ಇವರು ಇಲ್ಲಿಗೆ ಆಗಮಿಸಿರುವುದು ಹಾಗೂ ಉರಿಲಿಂಗ ಪೆದ್ದಿಯವರ ಮಠಕ್ಕೆ ಕಟ್ಟಾ ಭಕ್ತರಾಗಿ ನಡೆದುಕೊಂಡು ಬರುತ್ತಿರುವುದನ್ನು ನೋಡಿದರೆ ಪೆದ್ದಿ ಶರಣರ ಮೂಲ ಸ್ಥಳ ಕಂಧಾರವೇ ಆಗಿದೆ ಎಂಬುದು ಸ್ಪಷ್ಟವಾಗುತ್ತದೆ...

ಕಾಮೆಂಟ್‌ಗಳಿಲ್ಲ: