ಗುರುವಾರ, ಅಕ್ಟೋಬರ್ 14, 2010

ಅಪರೂಪದ ಜಿಲ್ಲಾಧಿಕಾರಿ...

   ಹರ್ಷಗುಪ್ತಾ ಅವರು  ೨೦೦೭  ರಿಂದ ೨೦೧೦ ರ ವರೆಗೆ  ಬೀದರ ಜಿಲ್ಲೆಯ 
ಜಿಲ್ಲಾಧಿಕಾರಿ ಆಗಿದ್ದರು. ಈ ಕಾಲದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು 
ಮನೆ ಮಾತಾಗಿದ್ದರು. ಅವರ ಬಗ್ಗೆ ಹಿರಿಯ ಪತ್ರಕರ್ತರಾದ ಎಚ್.ಸಿ.ಖಡ್ಕೆ ಅವರು
'ಅಪರೂಪದ ಜಿಲ್ಲಾಧಿಕಾರಿ ಹರ್ಷಗುಪ್ತಾ' ಎಂಬ ಕೃತಿಯನ್ನು ಸಂಪಾದಿಸಿದ್ದಾರೆ. ಅದರಲ್ಲಿನ ನನ್ನ ಲೇಖನ ಇಲ್ಲಿ ಕೊಡಲಾಗಿದೆ. ಪುಸ್ತಕದಲ್ಲಿನ ಇತರೆ ಲೇಖನಗಳ ಶೀರ್ಷಿಕೆಗಳು ಮತ್ತು ಲೇಖಕರ ಹೆಸರಿನ್ ಪಟ್ಟಿ  ಸಹ ಕೊಡಲಾಗಿದೆ. 
ಮೆಡೋಸ್ ಟೇಲರ್ ಹಾದಿಯಲ್ಲಿ ಹರ್ಷ ಗುಪ್ತಾ -
              `ನೀವು ನಮ್ಮಲ್ಲಿಗೆ ಬಂದಾಗಿನಿಂದ ನಾವು ಸಿರಿವಂತರೂ, ಸುಖಿಗಳೂ ಆಗಿದ್ದೇವೆ. ನಿಮ್ಮಂಥ ದಯಾಮಯಿ ಅಧಿಕಾರಿಗಳನ್ನು ದೇವರು ರಕ್ಷಿಸಲಿ ಎಂದು ನಾವೆಲ್ಲರೂ ಆ ದೇವರಲ್ಲಿ ಪ್ರಾ ರ್ಥಿಸುತ್ತೇವೆ. ನೆಮ್ಮದಿಯ ಬದುಕು ಮತ್ತು ಆಸ್ತಿ ರಕ್ಷಣೆ ಇವು ಬ್ರಿಟಿಷ ಸರ್ಕಾರ್ ದ ಮಹತ್ವದ ಕೊಡುಗೆಗಳಾಗಿವೆ. ಅವುಗಳನ್ನು ನೀವು ನಮಗೆ ದೊರಕಿಸಿ ಕೊಟ್ಟಿರುವಿರಿ, ಬರಗಾಲ ಬಿದ್ದಾಗ ನೀವು ನಿಮ್ಮ ವೈಯಕ್ತಿಕ ಹಣದಿಂದ ಸಾವಿರಾರು ಜನರಿಗೆ ಜೀವನಾಧಾರ ಒದಗಿಸಿದ್ದೀರಿ. ತಮ್ಮಂಥ ಪರೋಪಕಾರಿ ಅಧಿಕಾರಿಗಳು ಹುಡುಕಿದರೂ ಸಿಗಲಾರರು. ಚಿಕ್ಕ  ಮಕ್ಕಳ ಕಾಳಜಿ ತೆಗೆದುಕೊಳ್ಳುವಂತೆ ನೀವು ನಮ್ಮ ಕಾಳಜಿ ತೆಗೆದುಕೊಂಡಿದ್ದೀರಿ.'
      ಫಿಲಿಪ್ ಮೆಡೋಸ್ ಟೇಲರ್ ಎಂಬ ಅಧಿಕಾರಿ ಬೇರೆಡೆ ವರ್ಗವಾಗಿ ಹೋಗುತ್ತಿದ್ದಾಗ ನಳದುರ್ಗದ ಜನತೆ 1857ನೇ ಇಸ್ವಿ ಆಗಸ್ಟ್ 27ರಂದು ಸಲ್ಲಿಸಿದ ಸನ್ಮಾನ ಪತ್ರದ ಒಕ್ಕಣೆ ಇದಾಗಿದೆ. ಟೇಲರ್ ಅವರ ದಕ್ಷತೆ, ಜನಪರ ಕಾಳಜಿ, ಸಹೃದಯತೆ, ಸಜ್ಜನಿಕೆ, ಪ್ರಾಮಾಣಿಕತೆಯನ್ನು ಇದು ಎತ್ತಿ ತೋರಿಸುತ್ತದೆ. ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆಯಲ್ಲಿರುವ ಈ ಪಟ್ಟಣ ನಿಜಾಮನ ಕಾಲದಲ್ಲಿ ಮಹತ್ವದ ಸ್ಥಾನವಾಗಿತ್ತು. ಮೆಡೋಸ್ ಟೇಲರ್ 1853ರಿಂದ ೧೮೫೭ ರವರೆಗೆ ಅಲ್ಲಿಯ ಜಿಲ್ಲಾಧಿಕಾರಿಯಾಗಿದ್ದರು.  1808ರಲ್ಲಿ ಇಗ್ಲೆಂಡ ನಲ್ಲಿ ಹುಟ್ಟಿ ಚಿಕ್ಕವಯಸ್ಸಿನಲ್ಲಿಯೇ ಭಾರತಕ್ಕೆ ಆಗಮಿಸಿದ ಇವರು 1824ರಲ್ಲಿ ನಿಜಾಮನ ಸೈನ್ಯಕ್ಕೆ ಸೇರ್ಪಡೆಯಾಗುತ್ತಾರೆ.
    ನಂತರ ತಮ್ಮ ಬುದ್ಧಿವಂತಿಕೆ, ಕಾರ್ಯ ಕೌಶಲ್ಯದಿಂದ ಮೇಲಾಧಿಕಾರಿಗಳ ಮನಸ್ಸು ಗೆದ್ದು ನಳದುರ್ಗ, ಬೇರಾರ, ಔರಂಗಾಬಾದ್ ಮತ್ತು ಚಿಕ್ಕ ಸಂಸ್ಥಾನವಾಗಿದ್ದ ಸುರಪುರದ ಕಮೀಷನರ್ ಆಗಿ ನೇಮಕಗೊಳ್ಳುತ್ತಾರೆ. ಅಧಿಕಾರದಲ್ಲಿದ್ದಾಗ ಜನೋಪಕಾರಿ ಕಾರ್ಯಗಳನ್ನು ಕೈಗೊಂಡು ತಮ್ಮ ಹೆಸರು ಅಜರಾಮರಗೊಳಿಸಿದ್ದಾರೆ. ಸಾಹಿತಿ, ಚಿತ್ರಕಾರ ಸಹ ಆಗಿದ್ದ ಅವರು ಬೀದರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸ್ಮಾರಕಗಳ ಚಿತ್ರ ತೆಗೆದು ಹಾಗೂ ಇಲ್ಲಿನ ಇತಿಹಾಸವನ್ನು ಗ್ರಂಥಗಳಲ್ಲಿ ದಾಖಲಿಸಿ ಈ ಭಾಗ ಎಲ್ಲೆಡೆ ಪ್ರಸಿದ್ಧವಾಗುವಂತೆ ಮಾಡಿದ್ದಾರೆ. ಈ ಭಾಗದಲ್ಲಿ ಪದೇ ಪದೇ ಸಂಚರಿಸಿ ಜನರ ಕಷ್ಟಗಳನ್ನು ಅರಿಯಲು ಪ್ರಯತ್ನಿಸಿದ್ದರು. ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಯತ್ನ ನಡೆಸಿದ್ದರು.       
      ಅಂಥ ಅಧಿಕಾರಿಗಳು ಈಗ ಇಲ್ಲದಿರಬಹುದು. ಆದರೆ ಅವರ ದಾರಿಯಲ್ಲಿ ನಡೆಯಲು ಪ್ರಯತ್ನ ಮಾಡುತ್ತಿರುವವರು ಕೆಲವರಾದರೂ ದೊರೆಯುತ್ತಾರೆ. ಅಂಥವರಲ್ಲಿ ಈಗ ಬೀದರನ ಜಿಲ್ಲಾಧಿಕಾರಿ ಆಗಿರುವ ಹರ್ಷ ಗುಪ್ತಾ ಪ್ರಮುಖರು ಎನ್ನಬಹುದು. ಇವರು ಇತರೆ ಅಧಿಕಾರಿಗಳಂತೆ ಕೇವಲ ಸರ್ಕಾರದ್  ಯೋಜನೆಗಳನ್ನು  ಜಾರಿಗೊಳಿಸಲಷ್ಟೇ ತಮ್ಮ ಕಾರ್ಯವ್ಯಾಪ್ತಿ ಸೀಮಿತಗೊಳಿಸದೆ ಸ್ವತಂತ್ರವಾಗಿ ಯೋಚಿಸಿ ಕೆಲಸ ನಿರ್ವಹಿಸುವ ಅಧಿಕಾರಿ ಆಗಿದ್ದಾರೆ.
     ಜಿಲ್ಲಾಧಿಕಾರಿಯಾಗಿ ಹಾಗೂ ವಿಭಾಗಾಧಿಕಾರಿಯಾಗಿ ಬೀದರ ಮತ್ತು ಗುಲ್ಬರ್ಗದಂತಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಬಸವಕಲ್ಯಾಣ, ಹುಮನಾಬಾದ್, ಭಾಲ್ಕಿ, ಔರಾದ  ನಂತಹ ತಾಲ್ಲೂಕು ಕೇಂದ್ರಗಳಲ್ಲಿ ಕೈಗೊಂಡ ರಸ್ತೆ ಅಗಲಗೊಳಿಸುವ ಕಾರ್ಯ ಇವರ ಮುಂದಾಲೋಚನೆಯ ಧ್ಯೋತಕವಾಗಿದೆ. ಬೀದರ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವುದರ ಹಿಂದೆ ಈ ಸ್ಥಳದ ಮಹತ್ವ ಎಲ್ಲರಿಗೂ ಗೊತ್ತಾಗಲಿ. ಹಿಂದುಳಿದ ಈ ಭಾಗ ಪ್ರವಾಸಿ ಕೇಂದ್ರವಾಗಿ ಪ್ರಸಿದ್ಧಿ ಪಡೆಯಲಿ ಅಲ್ಲದೆ ಔದ್ಯೋಗಿಕವಾಗಿ ಇದು ಪ್ರಗತಿ ಹೊಂದಲಿ ಎಂಬ ಪ್ರಾಮಾಣಿಕ ಕಾಳಜಿ ಅಡಗಿದೆ.
     ಮೆಡೋಸ್ ಟೇಲರ್ ಸುರಪುರ ಸಂಸ್ಥಾನದ ಕಲೇಕ್ಟರ್ ಆಗಿ 12ವರ್ಷ ಸೇವೆ ಸಲ್ಲಿಸಿದ ಕಾಲ ಬಹು ಮಹತ್ವದ್ದಾಗಿದೆ. ಅನ್ನ ನೀರಿಲ್ಲದೆ ಬಡತನದಲ್ಲಿ ಜೀವಿಸುತ್ತಿದ್ದ ಅಲ್ಲಿಯ ಜನರ ದಯನೀಯ ಸ್ಥಿತಿ ನೋಡಿದ ಅವರು ತಮಗೆ ಕೇವಲ ಕರ ವಸೂಲಿಗೆ ನೇಮಿಸಲಾಗಿದ್ದರೂ ಅನೇಕ ಜನಪರ ಕಾರ್ಯಗಳನ್ನು ಕೈಗೊಳ್ಳುತ್ತಾರೆ. ಕೆರೆ, ಕಟ್ಟೆಗಳನ್ನು ನಿರ್ಮಿಸಿ   ಬರಡು ನೆಲದಲ್ಲಿ ನೀರು ಚಿಮ್ಮುವಂತೆ ಮಾಡಿ ಎಲ್ಲೆಡೆ ಹಸಿರು ಕಂಗೊಳಿಸುವಂತೆ ಮಾಡುತ್ತಾರೆ. ಹತ್ತಿ ಬೆಳೆಯಲು ಉತ್ತೇಜನ ಕೊಟ್ಟು ನೂಲು ತೆಗೆಯುವ ಮತ್ತು ಬಟ್ಟೆ ನೇಯುವ ಕೈಗಾರಿಕೆ ಆರಂಭಿಸುತ್ತಾರೆ.
     ಹರ್ಷ ಗುಪ್ತಾ ಸಹ ಜನರ ಬದುಕನ್ನು ಹಸನುಗೊಳಿಸುವ ನಿಟ್ಟಿನಲ್ಲಿ ಯೋಚಿಸುವ ವ್ಯಕ್ತಿಯಾಗಿದ್ದಾರೆ. ಬೀದರ ಜಿಲ್ಲೆ ಸಮಗ್ರವಾಗಿ ಅಭಿವೃದ್ಧಿ ಕಾಣಬೇಕಾದರೆ ಇಲ್ಲಿನ ಜನರು ಶೈಕ್ಷಣಿಕವಾಗಿ ಮುಂದೆ ಬರುವುದು ಅವಶ್ಯಕವಾಗಿದೆ ಎಂಬುದನ್ನು ಮನಗಂಡು ಶಾಲೆಗಳಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಿದ್ದಾರೆ. ಬೋಧನಾ ಕ್ರಮದಲ್ಲಿ ಬದಲಾವಣೆ ತಂದಿದ್ದಾರೆ. ಶಿಕ್ಷಕರ ಕಾರ್ಯಾಗಾರ ನಡೆಸಿದ್ದಾರೆ. ಶಿಕ್ಷಕರು ಸರಿಯಾಗಿ ಪಾಠ ಮಾಡುವಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದಾರೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷಾ ಕೇಂದ್ರಗಳ ಸುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಿ ನಕಲು ಹಾವಳಿ ತಡೆದಿದ್ದಾರೆ. ಒಟ್ಟು ಫಲಿತಾಂಶ ಕಡಿಮೆ ಬಂದರೂ ಸಹ ಗುಪ್ತಾ ಅವರ ಕ್ರಮದಿಂದ ವಿದ್ಯಾರ್ಥಿಗಳು ಓದುವ ವಾತಾವರಣ ನಿರ್ಮಾಣವಾಗಿದೆ. ಅಲ್ಲದೆ ಶೈಕ್ಷಣಿಕ ಗುಣಮಟ್ಟ ಸುಧಾರಿಸಿದ್ದು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯ `ಅಸಲಿ' ರಿಜಲ್ಟ್ ಬರುತ್ತಿದೆ ಎಂದು ಎಲ್ಲರೂ ಹೆಮ್ಮೆಯಿಂದ ಹೇಳಿಕೊಳ್ಳುವಂತಾಗಿದೆ.
     ಗ್ರಾಮ ಪಂಚಾಯತಿ ಮಟ್ಟದಲ್ಲಿ `ಜನಸ್ಪಂದನ' ಸಭೆಗಳನ್ನು ಯಶಸ್ವಿಯಾಗಿ ನಡೆಸಿ ಆಡಳಿತವನ್ನು ಜನರ ಮನೆ ಬಾಗಿಲಿಗೆ ಒಯ್ಯುವ ಕೆಲಸ ಮಾಡಿದ್ದಾರೆ. ಹಳ್ಳಿ ಹಳ್ಳಿಗೆ ಹೋಗಿ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬೆರೆತು ಅವರ ಸಮಸ್ಯೆಗಳನ್ನು ಆಲಿಸುತ್ತಾರೆ. ಜನಸ್ಪಂದನ ಸಭೆಗಳಲ್ಲಿ ತಾವು ಸ್ವತಃ ವೃದ್ಧಾಪ್ಯ ವೇತನ ಒಳಗೊಂಡು ವಿವಿಧ  ಸೌಲಭ್ಯಗಳ ಮಂಜೂರಾತಿ ಪತ್ರಗಳನ್ನು ವಿತರಿಸಿ ಅವ್ಯವಹಾರ ನಡೆಯದಂತೆ ನೋಡಿಕೊಂಡಿದ್ದಾರೆ.
      ನೌಕರರ ಮೇಲೆ ಅಂಕುಶವಿರಿಸಿ ಲಂಚಗುಳಿತನಕ್ಕೆ ಕಡಿವಾಣ ಹಾಕಿದ್ದಾರೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗುವಂತೆ ಸತತವಾಗಿ ಪ್ರಯತ್ನಿಸುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲಿಯೇ ಅನ್ಯಾಯ ನಡೆದರೂ ಜಿಲ್ಲಾಧಿಕಾರಿಗಳಿಗೆ ಹೇಳಿದರಾಯಿತು, ಅವರು ಸರಿಪಡಿಸುತ್ತಾರೆ ಎಂದು ನಿರ್ಭಿತಿಯಿಂದ ಹೇಳುವಂತಹ ಆತ್ಮವಿಶ್ವಾಸ ಸಾಮಾನ್ಯ ವ್ಯಕ್ತಿಯಲ್ಲಿ ಮೂಡುವಂತೆ ಮಾಡಿದ್ದಾರೆ.
    ಜನಮೆಚ್ಚುಗೆಯ ಕಾರ್ಯ ಮಾಡಿ ಹೆಸರು ಗಳಿಸಿದ ಅಧಿಕಾರಿಗಳು ಬೆರಳೆಣಿಕೆಯಷ್ಟು ಮಾತ್ರ ಸಿಗುತ್ತಾರೆ. ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಟಿ.ಎನ್.ಶೇಷನರು  ಚುನಾವಣಾ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತಂದಿರುವುದು ಮರೆಯಲಾಗದ ಕಾರ್ಯವಾಗಿದೆ. ಪೊಲೀಸ್ ಅಧಿಕಾರಿಯಾಗಿ ಕಿರಣ ಬೇಡಿ ಸಲ್ಲಿಸಿದ ಸೇವೆ ಅವಿಸ್ಮರಣೀಯ. ಮುಂಬೈ ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಗೋ.ರಾ,ಖೈರನಾರ್ ಅವರು ಪಾತಕಿ ದಾವೂದ್ ಇಬ್ರಾಹಿಂ ಅವರಿಗೆ ಸಂಬಂಧಿಸಿದ ಕಟ್ಟಡಗಳನ್ನು ಯಾವುದೇ ಮುಲಾಜಿಲ್ಲದೆ ಕೆಡವಿ ಹೆಸರು ಗಳಿಸಿದ್ದಾರೆ. ಇನ್ನು ಚಿಕ್ಕವರಾಗಿರುವ ಹರ್ಷ ಗುಪ್ತಾ ಅವರು ಸಹ ಮುಂದೆ ಅವರಂತೆಯೇ ಆಗುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ. ಅವರು ಕೈಗೊಳ್ಳುವ ಯಾವುದೇ ಕೆಲಸ ಕಾರ್ಯದಲ್ಲಿ ಅಡೆತಡೆಗಳು ಬರದಿರಲಿ ಎಂದು ನಾವೆಲ್ಲರೂ ಪ್ರಾರ್ಥಿಸಬೇಕಾಗಿದೆ.

ಪುಸ್ತಕದಲ್ಲಿನ ಇತರೆ ಲೇಖನಗಳ  ಶಿರ್ಷಿಕೆಗಳು ಮತ್ತು ಲೇಖಕರ ವಿವರ:
1) ಬೀದರ ಜಿಲ್ಲೆಯ ಇತಿಹಾಸ ನಿರ್ಮಿಸಿದ ಜಿಲ್ಲಾಧಿಕಾರಿ ಹರ್ಷ ಗುಪ್ತಾ  - ಪೂಜ್ಯ ಶ್ರೀ  ಬಸವಲಿಂಗ ಪಟ್ಟದ್ದೇವರು ಭಾಲ್ಕಿ 
2) ಇರಬೇಕು ಇಂಥ ಜಿಲ್ಲಾಧಿಕಾರಿ 
- ಪದ್ಮರಾಜ ದಂಡಾವತಿ
3) ಬೀದರ ಜಿಲ್ಲೆಯಲ್ಲಿ ದಂತಕತೆಯಾಗಿರುವ ಜಿಲ್ಲಾಧಿಕಾರಿ 
- ವೀರೇಂದ್ರ ಸಿಂಪಿ
4) ಪ್ರವಾಸೋದ್ಯಮ ಅಭಿವೃದ್ಧಿಗೆ ಹರ್ಷಗುಪ್ತಾರ ಕೊಡುಗೆ 
- ಬಿ.ಆರ್.ಕೊಂಡಾ
5) ಅಭಿವೃದ್ಧಿಯ ಹರಿಕಾರ ಹರ್ಷಗುಪ್ತಾ  
- ಶ್ರೀ ಸಿದ್ಧರಾಮ ಶರಣರು ಬೆಲ್ದಾಳ
6) ನರ್ತಕಿ ಬಾವಿಯ ಬೆನ್ನು ಹತ್ತಿದ ಜಿಲಾಧಿಕಾರಿ  
-ಶಿವಕುಮಾರ ನಾಗವಾರ
7) ಕಲ್ಯಾಣ ನಾಡು ಕಟ್ಟ ಬಂದ ಜಿಲ್ಲಾಧಿಕಾರಿ  
-ಶಿವಕುಮಾರ ಕಟ್ಟೆ
8) ಅಪ್ರತಿಮ ಜಿಲ್ಲಾಧಿಕಾರಿ ಹರ್ಷಗುಪ್ತಾ  
-ಎಚ್.ಶಕುಂತಲಾ ಖಡ್ಕೆ
9) ಮಾದರಿ ಬೀದರಿನ ರೂವಾರಿ ಹರ್ಷಗುಪ್ತಾ  
-ಎಂ.ಜಿ.ಗಂಗನಪಳ್ಳಿ
10) ಜನನಾಯಕ ಜಿಲ್ಲಾಧಿಕಾರಿ ಹರ್ಷಗುಪ್ತಾ  
- ಸೋಮನಾಥ ಮುದ್ದಾ ಭಾಲ್ಕಿ
11) ಶಿಕ್ಷಣ ಪ್ರೇಮಿ ಹರ್ಷಗುಪ್ತಾ  
-ಮಯೂರ ಬಸವರಾಜ
12) ಜಿಲ್ಲೆಯ ಆಪ್ತ ಶ್ರೀ ಹರ್ಷಗುಪ್ತಾ  
- ಎಂ.ಜಿ.ದೇಶಪಾಂಡೆ
13) ಬೀದರ ಅಭಿವೃದ್ಧಿಯತ್ತ ಹರ್ಷಗುಪ್ತಾರ ಚಿತ್ತ  
- ಎಂ.ಎಸ್.ಮನೋಹರ
14) ಜಿಲ್ಲೆಗೊಬ್ಬ ಹರ್ಷಗುಪ್ತಾರಂತಹ ಜಿಲ್ಲಾಧಿಕಾರಿ ಇದ್ದರೆ ಸಾಕು
- ಬಾ.ನಾ.ಸೋಲಾಪುರೆ
15) ಹರ್ಷಗುಪ್ತಾ ಅಧಿಕಾರಿಯಲ್ಲ - ಅವತಾರಿ ಪುರುಷ   
- ಹಂಶಕವಿ
16) ಜಿಲ್ಲಾಧಿಕಾರಿಗಳಿಗೆ ಮಾದರಿ ಈ ಜಿಲ್ಲಾಧಿಕಾರಿ 
-ಡಾ.ರಘುಶಂಖ ಭಾತಂಬ್ರಾ
17) ಬೀದರ ಮತ್ತು ಬದುಕು ರೂಪಿಸಿದ ಹರ್ಷಗುಪ್ತಾ    
-ಎಸ್.ರಾಮಕೃಷ್ಣನ್
18) ಮೆಡೋಸ್ ಟೇಲರ್ ಹಾದಿಯಲ್ಲಿ ಹರ್ಷಗುಪ್ತಾ     
-ಮಾಣಿಕ ಭುರೆ ಬಸವಕಲ್ಯಾಣ
19) ಮೌಲ್ಯಾಧಾರಿತ ಶಿಕ್ಷಣ ಬೇಕು: ಹರ್ಷಗುಪ್ತಾ       
- ಪ್ರೊ.ಎಂ.ಎಂ.ತಂಬಾಕೆ
20) ಕ್ರೀಯಾಶೀಲ ಜಿಲ್ಲಾಧಿಕಾರಿ ಹರ್ಷಗುಪ್ತಾರ ಕಾಯಕನಿಷ್ಠೆ     
- ರಮೇಶ ಬಿರಾದಾರ
21) ಬೀದರ ಸಂಸ್ಕೃತಿ ಕಂಡ ಚೇತನ- ಹರ್ಷಗುಪ್ತಾ      
- ಪ್ರೋ ಈಶ್ವರ ಹೆಬ್ಬಾಳಕರ್
22) ಹರ್ಷಗುಪ್ತಾರ ಮಂತ್ರ: ಸದ್ದಿಲ್ಲದೆ ಕೆಲಸ, ಕೆಲಸವೇ ಪ್ರಚಾರ    - ಶಿವರಾಜ ಕನಶೆಟ್ಟಿ ಬೀದರ
23) ಕರ್ಮಯೋಗಿ ಹರ್ಷಗುಪ್ತಾರ ಆದ್ಯತೆಗಳು      
- ಡಾ.ರವೀಂದ್ರನಾಥ ನಾರಾಯಣಪುರ
24) ಜನಪರ-ಪ್ರಗತಿಪರ ಜಿಲ್ಲಾಧಿಕಾರಿ ಹರ್ಷಗುಪ್ತಾ     
- ಧನರಾಜ ಫುಲಾರೆ
25) ಹರ್ಷಗುಪ್ತಾ: ಮನಮಂದಿರದ ನಂದಾದೀಪ     
- ರುಕ್ಮೋದ್ದೀನ್ ಇಸ್ಲಾಂಪುರ
26) ಒಬ್ಬ ಅಪರೂಪದ ಜಿಲ್ಲಾಧಿಕಾರಿ ಹರ್ಷಗುಪ್ತಾ     
- ವಿಶ್ವಾರಾಧ್ಯ ಸತ್ಯಂಪೇಟ್
27) ಸಾಂಸ್ಕೃತಿಕ ಲೋಕದ ರಾಯಭಾರಿ ಹರ್ಷಗುಪ್ತಾ    
- ಡಾ.ಗವಿಸಿದ್ದಪ್ಪ ಪಾಟೀಲ
28) ಕರ್ಮವೀರ ಹರ್ಷಗುಪ್ತಾ      
-ಎಚ್.ಕಾಶಿನಾಥರೆಡ್ಡಿ
29) ಬದಲಾವಣೆಯ ಹರಿಕಾರ ಡಿ.ಸಿ.ಹರ್ಷಗುಪ್ತಾ    
- ಡಾ.ಎಸ್.ಎಸ್.ಸಿದ್ಧಾರೆಡ್ಡಿ
30) ಬೀದರ ಬೆಳಕು- ಜಿಲ್ಲಾಧಿಕಾರಿ ಹರ್ಷಗುಪ್ತಾ     
- ಶಿವಕುಮಾರ ಟೆಂಕಾಳೆ
31) ಬೀದರ ಜಿಲ್ಲೆಗೆ ಹೊಂಬೆಳಕು ನೀಡಿರುವ ಹರ್ಷಗುಪ್ತಾ    
- ಸಿದ್ರಾಮಪ್ಪ ಮಾಸಿಮಾಡೆ
32) ಮಾನವೀಯತೆ ಮೆರೆದ ಮಾದರಿ ಜಿಲ್ಲಾಧಿಕಾರಿ     
- ಡಾ.ಜಯದೇವಿ ಗಾಯಕವಾಡ
33) ಬಡವರ ಬಂದು, ದಕ್ಷ ಆಡಳಿತಗಾರ ಶ್ರೀ ಹರ್ಷಗುಪ್ತಾ    
- ಶೇಖ ಮುಸ್ತಾಕ ಅಲಿ
34) ಬೀದರಿನ ಅಮರ ಹರ್ಷಗುಪ್ತಾ    
-ಪಿ.ಬಸವರಾಜ
35) ನ್ಯಾಯ ನಿಷ್ಠುರಿ ಜಿಲ್ಲಾಧಿಕಾರಿ    
-ರಾಜೇಶ್ರೀ ಶ್ರೀಕಾಂತಸ್ವಾಮಿ
36) ಮಂತ್ರಿಯಿಂದಾಗದ್ದು ಒಬ್ಬ ಜಿಲ್ಲಾಧಿಕಾರಿ ಮಾಡಬಲ್ಲ ಎಂಬುದಕ್ಕೆ ಹರ್ಷಗುಪ್ತಾ ಸಾಕ್ಷಿ:
      ಒಂದು ಸುದ್ದಿ     
-ಡಾ.ರಾಜೇಂದ್ರ ಯರನಾಳೆ
37) ಡಿ.ಸಿ.ಹರ್ಷಗುಪ್ತಾ: ಮಾನವೀಯತೆ    
-ಎಂ.ಪಿ.ಮುದಾಳೆ
38) ಕ್ಯಾರಿ ಆನ್ ಸರ್, ಆಲ್ ದಿ ಬೆಸ್ಟ್    
- ಚಂದ್ರಗುಪ್ತ ಚಾಂದಕವಠೆ
39) ಆದರ್ಶ ಜಿಲ್ಲಾಧಿಕಾರಿ ಶ್ರೀ ಹರ್ಷಗುಪ್ತಾ    
- ಪ್ರೊ.ಸೂಗಯ್ಯ ಹಿರೇಮಠ
40) ದಕ್ಷ ಜಿಲ್ಲಾಧಿಕಾರಿ ಹರ್ಷಗುಪ್ತಾ     
- ಪ್ರೊ.ಬಾಬುರಾವ ವಡ್ಡೆ
41) ಬಾಲ ಕಾರ್ಮಿಕರ ಸ್ವಾಭಿಮಾನದ ಹಣತೆ ಹರ್ಷಗುಪ್ತಾ    
-ಕೆ. ಜಯರಾಂ ಮಳವಳ್ಳಿ 
42) ಬೀದರ ಹತಾಶೆಯಿಂದ ಹರ್ಷದೆಡೆಗೆ     
-ಎಚ್.ಸಿ.ಖಡ್ಕೆ
..................................

ಕಾಮೆಂಟ್‌ಗಳಿಲ್ಲ: