ಗುರುವಾರ, ಅಕ್ಟೋಬರ್ 14, 2010

`ಅನುಭವ ಮಂಟಪ ಪ್ರಶಸ್ತಿ ...' ಕೃತಿಯ ಬಗ್ಗೆ


    2008ರಲ್ಲಿ ಬಿಡುಗಡೆಯಾದ ನನ್ನ 
`ಅನುಭವ ಮಂಟಪ ಪ್ರಶಸ್ತಿ ಪುರಸ್ಕೃತರು' 
ಕೃತಿಯಲ್ಲಿನ ಲೇಖಕರ ನುಡಿ ಮತ್ತು ಪ್ರಸ್ತಾವನೆಯಲ್ಲಿನ 
ಆಯ್ದ ಭಾಗ ಇಲ್ಲಿ ಕೊಡಲಾಗಿದೆ.
ಡಾ.ಚನ್ನಬಸವ ಪಟ್ಟದ್ದೇವರು ಅನುಭವ ಮಂಟಪ ಪ್ರಶಸ್ತಿ ರಾಜ್ಯದ ಪ್ರತಿಷ್ಠಿತ ಪ್ರಶಸ್ತಿಗಳಲ್ಲೊಂದಾಗಿದೆ. 1999ರಿಂದ ಬಸವಕಲ್ಯಾಣದ ಅನುಭವ ಮಂಟಪದಲ್ಲಿ ನಡೆಯುವ ಶರಣ ಕಮ್ಮಟದ ಸಂದರ್ಭದಲ್ಲಿ ಕೊಡಲಾಗುವ ಈ ಪ್ರಶಸ್ತಿ ಇದುವರೆಗೆ ವಿವಿಧ ಕ್ಷೇತ್ರಗಳ ಹತ್ತು ಜನ ಗಣ್ಯರಿಗೆ ಸಂದಿದೆ. ಪ್ರಶಸ್ತಿ ಕೊಡಲು ಆರಂಭಿಸಿ ಹತ್ತು ವರ್ಷಗಳಾಗುತ್ತಿರುವ ಶುಭ ಸಂದರ್ಭದಲ್ಲಿ ಅನುಭವ ಮಂಟಪ ಪ್ರಶಸ್ತಿ ಪುರಸ್ಕೃತರು ಎಂಬ ಕಿರು ಹೊತ್ತಗೆಯನ್ನು ಬರೆಯಲಾಗಿದೆ....
   ಮಹಾತ್ಮಾ ಬಸವೇಶ್ವರರು 12ನೇ ಶತಮಾನದಲ್ಲಿ ಸಮಾಜೋಧಾರ್ಮಿಕ್  ಚಳವಳಿಯನ್ನು ಹುಟ್ಟಿ ಹಾಕಿದ ನಾಡು ಬೀದರ ಜಿಲ್ಲೆಯ ಬಸವಕಲ್ಯಾಣ. ಅಂದು ಇಲ್ಲಿದ್ದ ಅನುಭವ ಮಂಟಪ ಬಸವಾದಿ ಶರಣರು ನಡೆಸಿದ ಕಾರ್ಯಚಟುವಟಿಕೆಗಳ ಕೇಂದ್ರವಾಗಿತ್ತು. ಅವರು ಇಲ್ಲಿ ಸೇರಿ ವಚನ ಸಾಹಿತ್ಯವನ್ನು ರಚಿಸುವ ಮೂಲಕ ಜಗತ್ತಿಗೆ ಹೊಸ ತತ್ವ, ನೀತಿ ಸಿದ್ಧಾಂತವನ್ನು ಕೊಟ್ಟರು. ಮೌಢ್ಯತನದ ಅಂಧಕಾರದಲ್ಲಿ ತೇಲಾಡುತ್ತಿದ್ದವರ ಮನದಲ್ಲಿ ಅರಿವಿನ ಬೆಳಕು ಮೂಡಿಸಿದರು. ಜೀವಪರ, ಜನಪರವಾದ ಆಲೋಚನೆಗೈದರು. 
     ಬಸವಣ್ಣನವರ ಕರೆಗೆ ಓಗೋಟ್ಟು ವಿವಿಧೆಡೆಯಿಂದ ನೂರಾರು ಶರಣರು ಅನುಭವ ಮಂಟಪಕ್ಕೆ ಬಂದು ಸೇರಿದ್ದರು. ಅದು ಜಾತಿ, ಮತ ಕುಲ ಗೋತ್ರದ ಕಟ್ಟಳೆ ಇಲ್ಲದೆ ಸರ್ವರಿಗೂ ಆಶ್ರಯ ನೀಡಿದ ಸಮುದಾಯ ಭವನವಾಗಿತ್ತು. ಇವನಾರವ ಇವನಾರವ ಎಂದೆನಿಸದೆ ಇವ ನಮ್ಮವ ಇವ ನಮ್ಮವ ಎಂಬುದನ್ನು ಕಲಿಸಿದ ಎಲ್ಲರಲ್ಲೂ ಭಾತೃತ್ವ ಭಾವನೆಯನ್ನು ಬೆಳೆಸಿದ ಪ್ರಥಮ ಪಾಠಶಾಲೆ ಎಂದರೆ ತಪ್ಪಾಗಲಾರದು. 
      ಆದರೆ ಅಂದಿನ ಆ ಭವ್ಯ ಮಂಟಪ ಇಂದು ಅಸ್ತಿತ್ವದಲ್ಲಿಲ್ಲ. ಆದ್ದರಿಂದ ಇಲ್ಲಿಯ ಮರಿದೇವರ ಗುಡ್ಡದಲ್ಲಿ ನೂತನವಾಗಿ ಅನುಭವ  ಮಂಟಪವನ್ನು ನಿರ್ಮಿಸಲಾಗಿದೆ. 29ನೇ ಅಕ್ಟೋಬರ್ 1955ರಂದು ಜಯಚಾಮರಾಜ ಒಡೆಯರ್ ಅವರು ಅನುಭವ ಮಂಟಪದ ಶಂಕುಸ್ಥಾಪನೆಗೈದರು. ಮಾಜಿ ಉಪ ರಾಷ್ಟ್ರಪತಿ ಬಿ.ಡಿ.ಜತ್ತಿ, ಮುಂಬೈ ರಾಜ್ಯದ ಮಂತ್ರಿಯಾಗಿದ್ದ ಎಂ.ಪಿ.ಪಾಟೀಲ, ಮಾಜಿ ಸಚಿವ ಭೀಮಣ್ಣ ಖಂಡ್ರೆ, ಬಾಬಾಸಾಹೇಬ್ ವಾರದ, ವಿಶ್ವನಾಥರಡ್ಡಿ ಮುದ್ನಾಳ ಮುಂತಾದವರು ಈ ಮಹತ್ವದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 1980ರಲ್ಲಿ ಮಂಟಪದ ಕಾಮಗಾರಿ ಪೂರ್ಣಗೊಂಡಿತು. ಸುತ್ತಲೂ ಬೃಹತ್ ಕೆರೆ ಇರುವ ಕಾರಣ ಮಂಟಪಕ್ಕೆ ನೈಸರ್ಗೀಕ ಸೌಂದರ್ಯ ಪ್ರಾಪ್ತವಾಗಿದೆ. ಅಲ್ಲದೆ ಇದು ಲಿಂಗಾಕೃತಿಯಲ್ಲಿರುವ ಕಾರಣ ನೋಡುವವರಿಗೆ ಬೇರೆ ಸ್ಥಳಗಳಕ್ಕಿಂತ ಭಿನ್ನವೆನಿಸುತ್ತದೆ.....
    ನೂತನ ಅನುಭವ ಮಂಟಪದ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದವರಲ್ಲಿ ಭಾಲ್ಕಿಯ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ಅಗ್ರಗಣ್ಯರಾಗಿದ್ದಾರೆ. ಬಸವತತ್ವನಿಷ್ಠರಾಗಿದ್ದ ಇವರು ನಡೆದಾಡುವ ದೇವರೆಂದೇ ಖ್ಯಾತಿ ಪಡೆದಿದ್ದರು....ಬಸವಕಲ್ಯಾಣದಲ್ಲಿನ  ಶರಣರ ಸ್ಮಾರಕಗಳ ಪುನರ್ನಿರ್ಮಾಣಕ್ಕೆ ಸಂಕಲ್ಪಗೈದು ತ್ರಿಪುರಾಂತ ಕೆರೆ ದಂಡೆಯಲ್ಲಿ ಅರ್ಧಕ್ಕೆ ನಿಂತಿದ್ದ ನೂತನ ಅನುಭವ ಮಂಟಪದ ಕೆಲಸ ಆರಂಭಿಸಿದರು. ಕಲ್ಲು ಮಣ್ಣನ್ನು ತಲೆಮೇಲೆ ಹೊತ್ತುಕೊಂಡು ತಾವು ಸ್ವತಃ ದುಡಿದು ಕಟ್ಟಡ ಪೂರ್ಣಗೊಳಿಸಿದರು. ಈ ಕಾರ್ಯಕ್ಕೆ ಭೀಮಣ್ಣ ಖಂಡ್ರೆ ಹಾಗೂ ಬಿ.ಡಿ.ಜತ್ತಿಯವರು ಸಹಕರಿಸಿ ಧನಸಹಾಯ ಸಹ ಮಾಡಿದರು. ಪೂಜ್ಯ ಅಪ್ಪಗಳವರು ತಮ್ಮ ಬದುಕಿನುದ್ದಕ್ಕೂ ಸಮಾಜದಲ್ಲಿನ ಜಾತಿ ಪದ್ಧತಿ ನಿರ್ಮೂಲನೆಗಾಗಿ ಶ್ರಮಿಸಿದ ಇವರು ಕರ್ನಾಟಕ ಏಕೀಕರಣ ಚಳವಳಿಯಲ್ಲಿಯೂ ಭಾಗವಹಿಸಿದ್ದರು. ಇವರ ಕಾರ್ಯಸಾಧನೆಯನ್ನು ನೋಡಿ ಗುಲ್ಬರ್ಗ ವಿಶ್ವವಿದ್ಯಾಲಯವು 1993ರಲ್ಲಿ ಗೌರವ ಡಾಕ್ಟರೇಟ್ ಕೊಟ್ಟು ಗೌರವಿಸಿದೆ....
  ...ಇವರ ಹೆಸರಿನಲ್ಲಿಯೇ ಅನುಭವ ಮಂಟಪ ಪ್ರಶಸ್ತಿ ಕೊಡಲಾಗುತ್ತಿದೆ. ಈ ಕಾರಣವೂ ಶರಣ ಕಮ್ಮಟಕ್ಕೆ ಹೆಚ್ಚಿನ ಮಹತ್ವ ಪ್ರಾಪ್ತವಾಗಿದೆ. ಪ್ರಶಸ್ತಿಯು 25ಸಾವಿರ ನಗದು ಹಾಗೂ ಫಲಕವನ್ನೊಳಗೊಂಡಿದ್ದು ಈ ಭಾಗದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಎನಿಸಿದೆ. ಭಾಲ್ಕಿಯ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಕಾರ್ಯಕ್ರಮದ ಯಶಸ್ವಿಗೆ ದುಡಿಯುತ್ತಿರುವ ಶಾಸಕ ಈಶ್ವರ ಖಂಡ್ರೆ ಅವರು ಪ್ರಶಸ್ತಿಯ ಮೊತ್ತವನ್ನು ತಮ್ಮ ಸಂಸ್ಥೆಯಿಂದ ಭರಿಸುತ್ತಿದ್ದಾರೆ. ಇದುವರೆಗೆ 
ಶಾಂತರಸರು (1999)  ಡಾ.ಪಾಟೀಲ ಪುಟ್ಟಪ್ಪ (2000)  ಪ್ರೊ.ವಿ.ವಿ.ಸಂಗಮದ (2001)  ಡಾ.ಪುಟ್ಟರಾಜ ಗವಾಯಿ (2002) ಡಾ.ಭಗವಾನದಾಸ ತಿವಾರಿ (2003)  ಡಾ.ಡಿ.ಎಂ.ನಂಜುಂಡಪ್ಪ (2004)  ಸಿದ್ಧರಾಮ ಶರಣರು ಬೆಲ್ದಾಳ (2005) ವಿ.ಸಿದ್ಧರಾಮಣ್ಣ (2006)  ರಂಜಾನ ದರ್ಗಾ (2007)  ವಿಶ್ವೇಶ್ವರ ಭಟ್  (2008)  ಅವರಿಗೆ ಪ್ರಶಸ್ತಿ ಕೊಡಲಾಗಿದೆ.  2009 ರಲ್ಲಿ ರಾಮದುರ್ಗದ ಸಿದ್ಧಣ್ಣ ಲಂಗೋಟಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಕಾಮೆಂಟ್‌ಗಳಿಲ್ಲ: