ಗುರುವಾರ, ಅಕ್ಟೋಬರ್ 14, 2010

ಗಾಂಧಿ ಆಗ್ಬೇಕಂದುಕೊಂಡಾಗ' ಕೃತಿಯ ಚೆನ್ನುಡಿ

ಆತ್ಮೀಯರಾದ ಯುವ ಕವಿ ವೀರಣ್ಣ ಮಂಠಾಳಕರ್ ಅವರ ನಾಲ್ಕನೇ ಕೃತಿ 'ಗಾಂಧಿ ಆಗ್ಬೇಕಂದುಕೊಂಡಾಗ' ಕವನ ಸಂಕಲನ ಈಚೆಗೆ ಹುಮನಾಬಾದನ ಸಾಕ್ಷಿ ಪ್ರತಿಷ್ಠಾನದಿಂದ
 ಪ್ರಕಟಿಸಿ ಬಿಡುಗಡೆ ಮಾಡಲಾಯಿತು. ಅದಕ್ಕೆ ಬೆಂಗಳೂರಿನ ಲೇಖಕ ಪತ್ರಕರ್ತರಾದ ರಘುನಾಥ ಚ.ಹ. ಅವರು ಮುನ್ನುಡಿ ಬರೆದಿದ್ದಾರೆ. ಡಾ.ಜಯದೇವಿ ಗಾಯಕವಾಡ 
ಬೆನ್ನುಡಿ ಬರೆದಿದ್ದಾರೆ. ನಾನು (ಮಾಣಿಕ ಭುರೆ) ಕವಿ ಪರಿಚಯ `ಚೆನ್ನುಡಿ' ಬರೆದಿದ್ದು ಅದು ಮುಂದಿನಂತಿದೆ...
       ಯಾವುದೇ ಕ್ಷೇತ್ರದಲ್ಲಿ ಕ್ರಾಂತಿ ಮಾಡಲು ಕೆಚ್ಚೆದೆಯ ಜೊತೆಗೆ ಹುಚ್ಚು ಮನಸ್ಸು ಬೇಕು. ತೀವ್ರ ಆಸಕ್ತಿ ಇದ್ದರೆ ಮಾತ್ರ ತಾವು ಹಿಡಿದ ಕೆಲಸದಲ್ಲಿ ಪ್ರಗತಿ ಸಾಧಿಸುವುದು ಸಾಧ್ಯವಾಗುತ್ತದೆ. ವಿ.ಎಚ್.ವೀರಣ್ಣ ಮಂಠಾಳಕರ ಅವರು ಸಾಹಿತ್ಯ ರಚನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಹೈದ್ರಾಬಾದ ಕರ್ನಾಟಕ ಭಾಗದ ಪ್ರತಿಭಾವಂತ ಯುವ ಬರಹಗಾರರ ಸಾಲಿಗೆ ಸೇರ್ಪಡೆಗೊಂಡಿದ್ದಾರೆ. "ನಿನ್ನ ಓ(ವಾ)ರಗೆಯವರು ಹಣ ಗಳಿಸಿ ಮನಸ್ಯಾ ಆಗ್ಯಾರ, ನೀನು ಮಾತ್ರ ಉಪಯೋಗಕ್ಕೆ ಬಾರದ ಬರೆಯುವ ಹುಚ್ಚು ಹತ್ತಿಸಿಕೊಂಡಿದ್ದೀಯಾ" ಎಂದು ತಮ್ಮ ಬಗ್ಗೆ ಕೆಲವರು ಆಡಿದ ಕಟು ಮಾತುಗಳನ್ನು ಲೆಕ್ಕಿಸದೆ ಲೆಕ್ಕಣಿಕೆಗೆ ಕೆಲಸ ಕೊಡುತ್ತಲೇ ಬಂದಿದ್ದಾರೆ. ಬರೆಯುವುದರಲ್ಲಿಯೇ ಸಂತೃಪ್ತಿ ಕಂಡಿದ್ದಾರೆ.
      ಬೀದರ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಮಂಠಾಳ ಇವರ ಸ್ವಗ್ರಾಮ. ವೈಜನಾಥ ಹುವಪ್ನೋರ್ ಮತ್ತು ಶರಣಮ್ಮ ಅವರ ಎರಡನೇ ಮಗನಾಗಿ ಹುಟ್ಟಿದ ಇವರ ವಯಸ್ಸು ಈಗ 33ವರ್ಷ.  ಹೈಸ್ಕೂಲ ವರೆಗೆ ಸ್ವಗ್ರಾಮದಲ್ಲಿಯೇ ಓದಿದ್ದಾರೆ.  ಪದವಿ ಶಿಕ್ಷಣ ಬೀದರನಲ್ಲಿ ಪಡೆದುಕೊಂಡಿದ್ದಾರೆ. ತಂದೆ ತಾಯಿ ಕೂಲಿ ಕೆಲಸ ಮಾಡುತ್ತಿದ್ದ ಕಾರಣ ಶಾಲೆ ಕಲಿಯುವಾಗ ತೊಂದರೆ ಎದುರಿಸಿದ್ದಾರೆ. ಈ ಸಂದರ್ಭದಲ್ಲಿ ತಾವು ಅನುಭವಿಸಿದ ಕಷ್ಟ, ಸಹಿಸಿದ ಅನ್ಯಾಯವನ್ನು ಕಥೆ, ಕವನದ ವಸ್ತುವನ್ನಾಗಿಸಿ ವಿದ್ಯಾರ್ಥಿದೆಸೆಯಿಂದಲೇ   ಬರೆಯುವ ಹವ್ಯಾಸ ಬೆಳೆಸಿಕೊಂಡಿದ್ದಾರೆ.
        'ಭಾವಾಂತರಂಗ' 'ಹನಿಜೇನು' 'ಸುಳಿಗಳು' ಇವರ ಪ್ರಕಟಿತ ಕವನ ಸಂಕಲನಗಳಾಗಿವೆ. ಕೈಯಲ್ಲಿ ಕಾಸಿಲ್ಲದಿದ್ದರೂ ಹೇಗೋ ಮಾಡಿ ಮೊದಲ ಮಿನಿಕವಿತೆಗಳ ಸಂಕಲನ ಪ್ರಕಟಿಸಿದಾಗ ಮುಂದೆ ಮತ್ತೇ ಇಂಥ ಕಾರ್ಯಕ್ಕೆ ಇವರು ಕೈಹಾಕುವುದಿಲ್ಲ ಎಂದೇ ಅನಿಸಿತ್ತು. ಆದರೆ ಅಲ್ಲಿ ಇಲ್ಲಿ ಅಲೆದಾಡಿ ಸಿಕ್ಕಂತಹ ಕೆಲಸ ಮಾಡುತ್ತ  ದೊರೆತ  ಹಣದಲ್ಲಿ ಅಲ್ಪಸ್ವಲ್ಪ ಉಳಿತಾಯ ಮಾಡಿ ಈಗ ನಾಲ್ಕನೇ ಕವನ ಸಂಕಲನ ಪ್ರಕಟಿಸುತ್ತಿದ್ದಾರೆ. ಇವರ ಕವಿತೆಗಳು ಮತ್ತು ಲೇಖನಗಳು ನಾಡಿನ ದಿನಪತ್ರಿಕೆ, ವಾರಪತ್ರಿಕೆ ಮತ್ತು ಮಾಸ ಪತ್ರಿಕೆಗಳಲ್ಲಿಯೂ ಪ್ರಕಟಗೊಂಡಿವೆ. ಹಲವಾರು ಕಥೆಗಳನ್ನು ಸಹ ಬರೆದಿದ್ದಾರೆ. 'ಬದುಕಿನ ಬೆನ್ನೇರಿ' ಎಂಬ ಕಥೆ ಆಕಾಶವಾಣಿಯಿಂದ ಮರುಪ್ರಸಾರಗೊಂಡಿದೆ.      
       'ಸಂಕಲ್ಪ' ಎಂಬ ಸಾಹಿತ್ಯಕ್ಕೆ ಸಂಬಂಧಿಸಿದ ಮಾಸ ಪತ್ರಿಕೆ ಸಹ ಕೆಲಕಾಲ ನಡೆಸಿದ್ದಾರೆ. ಈಗಲೂ ಸಾಹಿತ್ಯ ಉಳ್ಳವರ ಸೊತ್ತು  ಆಗಿರುವುದರಿಂದ ಅನೇಕ ಬರಹಗಾರರು ನಿರ್ಲಕ್ಷಕ್ಕೊಳಗಾಗಿದ್ದಾರೆ. ಅಂಥವರನ್ನು ಗುರುತಿಸಿ ಪ್ರೋತ್ಸಾಹಿಸುವುದೇ ಪತ್ರಿಕೆಯ ಧ್ಯೇಯವಾಗಿತ್ತು. ತಾಲ್ಲೂಕು ಉದಯೋನ್ಮುಖ ಯುವ ಬರಹಗಾರರ ಸಂಘದ ಮತ್ತು ಜಿಲ್ಲಾ ಬರಹಗಾರರ ಮತ್ತು ಕಲಾವಿದರ ಬಳಗದ ತಾಲ್ಲೂಕು ಅಧ್ಯಕ್ಷರಾಗಿ ಬರಹಗಾರರನ್ನು ಸಂಘಟಿಸಿದ್ದಾರೆ. ಸಾಹಿತ್ಯಕ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದಾರೆ.
   ವಿವಿಧೆಡೆ ನಡೆದ ಕಥಾ, ಕಾವ್ಯ ಕಮ್ಮಟಗಳಲ್ಲಿ ಪಾಲ್ಗೊಂಡಿದ್ದಾರೆ.  ಕವಿಗೋಷ್ಠಿಗಳಲ್ಲಿ ಕವನ ವಾಚಿಸಿದ್ದಾರೆ. ಮೊದಲನೆಯ ಮಿನಿಕವಿತೆಗಳ ಸಂಕಲನ 'ಭಾವಾಂತರಂಗ" ದಲ್ಲಿ ಅಪ್ಪಟ ಪ್ರೇಮಿಯಂತೆ ಭಾಸವಾಗುತ್ತಾರೆ. ಆದರೆ ಈ ಸಂಕಲನದಲ್ಲಿ ಪ್ರೇಮಿಯ ಜೊತೆಗೆ ವಿರಹಿಯಾಗಿಯೂ ಕಾಣಿಸುತ್ತಾರೆ. ಜೀವನದ ದಟ್ಟ ಅನುಭವವನ್ನು ಕಟ್ಟಿ ಕೊಡುವ ಹಾಗೂ ನೈತಿಕ ಎಚ್ಚರ ಮೂಡಿಸುವ ಕವಿತೆಗಳನ್ನು ಸಂಕಲನ ಒಳಗೊಂಡಿದೆ. ಪರಿಪಕ್ವಗೊಂಡ ಅನುಭವದ ಮೂಸೆಯಿಂದ ಕೃತಿ ಮೂಡಿ ಬಂದಿದೆ.(ಸೆಪ್ಟೆಂಬರ್ 2010)

ಕಾಮೆಂಟ್‌ಗಳಿಲ್ಲ: