ಗುರುವಾರ, ಅಕ್ಟೋಬರ್ 14, 2010

ಮಳೆಗಾಗಿ ಉಪ್ಪು ದಹಿಸುವುದು

ಈ ಲೇಖನ ಪ್ರಜಾವಾಣಿಯ `ಸಂಗತ' ದಲ್ಲಿ ಪ್ರಕಟ ಆಗಿದೆ. ೨೦೧೦ ರ  ಜುಲೈ 1 ರಂದು ಈ  ಬಗ್ಗೆ ಸುದ್ದಿ ಸಹ ಬಂದಿತ್ತು.   
ಮಳೆಗಾಗಿ ಉಪ್ಪು ದಹಿಸುವ ಪ್ರಯೋಗ
     ಹಿಂಗಾರು ಹಂಗಾಮಿನ ವೇಳೆ ರಾಜ್ಯದಲ್ಲಿ ಮೋಡ ಬಿತ್ತನೆ ಮಾಡಿ ಕೃತಕ ಮಳೆ ತರಿಸುವುದಕ್ಕಾಗಿ ಸರ್ಕಾರ ಮುಂದಾಗಿರುವುದು ರೈತರ ಪಾಲಿಗೆ ಸಂತಸದ ಸುದ್ದಿ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಏಳು ಕಡೆ ರಾಕೆಟ್ ಉಡಾವಣೆ ಮೂಲಕ ಮೋಡ ಬಿತ್ತನೆ ಮಾಡಲಾಗುವುದು. ಇದಕ್ಕಾಗಿ ಒಟ್ಟು 35 ಕೋಟಿ ರೂ. ವೆಚ್ಚವಾಗಲಿದೆ ಎಂದು ಕಂದಾಯ ಸಚಿವ ಕರುಣಾಕರ ರೆಡ್ಡಿ ಹೇಳಿದ್ದಾರೆ. ಮಳೆ ಅಭಾವದಿಂದ  ಸಂಕಷ್ಟದಲ್ಲಿರುವ `ಅನ್ನದಾತ'ನಿಗಾಗಿ 35 ಕೋಟಿಯೇ ಏಕೆ ನೂರಾರು ಕೋಟಿ ಖರ್ಚು ಮಾಡಿದರೂ ತಪ್ಪೇನಿಲ್ಲ. ಆದರೆ ಈಚೆಗೆ ಮಹಾರಾಷ್ಟ್ರದ ಹಳ್ಳಿಗಳಲ್ಲಿ ಕೇವಲ ಒಂದೆರಡು 
ಸಾವಿರ ರೂ. ವೆಚ್ಚದ `ವರುಣಯಂತ್ರ'ದ ಪ್ರಯೋಗ ನಡೆಸಿ ಮಳೆ ಸುರಿಸಿರುವುದು ಗೊತ್ತಾಗಿದೆ.  ಇಂಥ ಅಲ್ಪ ವೆಚ್ಚದ ಪ್ರಯೊಗಕ್ಕೆ ಮುಂದಾದರೆ ಒಳಿತು.
     ರಾಕೆಟ್ ಉಡಾವಣೆಗೆ ಟವರಗಳನ್ನು ನಿರ್ಮಿಸಲು ಕಾಲಾವಕಾಶ ಬೆಕು.  ಆದ್ದರಿಂದ ಮುಂಗಾರು ಹಂಗಾಮು ಮುಗಿದ ನಂತರ ಮೋಡ ಬಿತ್ತನೆ ನಡೆಸಲಾಗುವುದು ಎಂದು ಸಚಿವರೇ ಸ್ಪಷ್ಟಪಡಿಸಿದ್ದಾರೆ. ಆದರೆ ವರುಣಯಂತ್ರಕ್ಕೆ ಟವರಗಳ ಅವಶ್ಯಕತೆ ಇಲ್ಲ. ಎಲ್ಲಿಯೂ, ಯಾರು ಬೇಕಾದರೂ ನಡೆಸಬಹುದಾದ ಸರಳ ಪ್ರಯೋಗ ಇದು. ಕೆಲ ವರ್ಷಗಳ ಹಿಂದೆ ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು ವಿಮಾನದ ಮೂಲಕ ಮೋಡ ಬಿತ್ತನೆ ನಡೆಸಿದ್ದವು. ಆದರೂ ಅಂದುಕೊಂಡಷ್ಟು ಯಶಸ್ಸು ದೊರೆಯಲಿಲ್ಲ. ಅದರಂತೆ ಟವರಗಳನ್ನು ನಿರ್ಮಿಸಿ ಕೈಗೊಳ್ಳುವ ಯೋಜನೆಯೂ ಫಲ ಕೊಡದಿದ್ದರೆ ಕೋಟಿಗಟ್ಟಲೇ ಹಣ ಪೋಲಾಗುವುದಿಲ್ಲವೇ ?
      ವರುಣಯಂತ್ರದ ಪ್ರಥಮ ಪ್ರಯೋಗ ಕಳೆದ ವರ್ಷ ನಾಂದೇಡ್ ಜಿಲ್ಲೆಯ ಸುಜಲೇಗಾಂವ ಎಂಬಲ್ಲಿ ತಜ್ಞರಾದ ಡಾ.ರಾಜಾ ಮರಾಠೆ ಎಂಬುವವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕೆಲ ಗಂಟೆಗಳಲ್ಲಿಯೇ ಧಾರಾಕಾರ ಮಳೆ ಸುರಿಯಿತು. ಮರಾಠೆ ಅವರು ಇಷ್ಟಕ್ಕೇ ತೃಪ್ತರಾಗದೆ ಸತತವಾಗಿ ಹತ್ತು ಸಲ ಈ ವಿಧಾನ ಅನುಸರಿಸಿದರು. ಒಂಬತ್ತು ಸಲ ಮಳೆಯಾಯಿತು. ಆಗ ಅವರು ಬೇರೆಯವರಿಗೂ ಈ ಬಗ್ಗೆ ತಿಳಿಹೇಳಿದರು.
     ಈ ವರ್ಷ ಮೃಗಶಿರಾ ಮಳೆಗೆ ವಿಳಂಬ ಆದಾಗ ಮಹಾರಾಷ್ಟ್ರದ ಅನೇಕ ಕಡೆ ಇಂಥ ಪ್ರಯೋಗ ನಡೆಸಲಾಗಿದೆ. ಈಚೆಗೆ ಪುಣೆಯಲ್ಲಿ ಸಕಾಳ ಪತ್ರಿಕೆ ಸಹಯೋಗದೊಂದಿಗೆ ವಿಜ್ಞಾನಿ ಡಾ.ವಿಜಯ ಭಟ್ಕರ್ ಅವರ ಅಧ್ಯಕ್ಷತೆಯಲ್ಲಿ ಈ ರೀತಿ ಯಶಸ್ವಿ ಪ್ರಯೋಗ ನಡೆಸಿದವರ ಸಮಾವೇಶ ಸಹ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ರೈತರು ವರುಣಯಂತ್ರದ ಪ್ರಯೋಗವೆಂದರೆ ಮಳೆಯ `ರಿಮೋಟ್ ಕಂಟ್ರೋಲ್' ಕೈಯಲ್ಲಿ ಇದ್ದಂತೆ. ಬೇಕೆಂದಾಗ ಮಳೆ ಸುರಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 
    ಈ ಬಗ್ಗೆ ಮಾಹಿತಿ ಪಡೆದುಕೊಂಡ ನಾನು ಹೆಚ್ಚಿನದನ್ನು ತಿಳಿದುಕೊಳ್ಳಲು ಉಸ್ಮಾನಾಬಾದ ಜಿಲ್ಲೆಯ ಜಳಕೋಟ್ ಮತ್ತು ಲೋಹಾರಾ ತಾಲ್ಲೂಕಿನ ಜೇವಳಿ ಗ್ರಾಮಕ್ಕೆ ಭೇಟಿ ಕೊಟ್ಟಿದ್ದೇನೆ. ಜಳಕೋಟ  ಗ್ರಾಮ ಪಂಚಾಯಿತಿ ಕಚೇರಿ ಎದುರು ಅದಾಗಲೇ ಎರಡು ಸಲ ಪ್ರಯೋಗ ನಡೆಸಲಾಗಿತ್ತು. ಎರಡೂ ಸಲ ಧೋ ಧೋ ಎಂದು ಮಳೆ ಸುರಿದಿದೆ ಎಂದು ಪಂಚಾಯಿತಿ ಉಪಾಧ್ಯಕ್ಷ ವೆಂಕಟ ಬೇಡಗೆ, ಸುನಿಲ ಮಾಳಗೆ ತಿಳಿಸಿದರು. ಸುಮಾರು 7 ಕಿ.ಮೀ. ವ್ಯಾಪ್ತಿಯಲ್ಲಿ ಮಳೆ ಬಂತು. ಜಿಪಂ ಸದಸ್ಯ ಗಣೇಶ ಸೋನಟಕ್ಕೆ ಅವರೇ ಯಂತ್ರದ ಎಲ್ಲ ಖರ್ಚನ್ನು ಕೊಟ್ಟು ಮಳೆ ಬರುವವರೆಗೆ ಇಲ್ಲಿಯೇ ಠಿಕಾಣಿ ಹೂಡಿದ್ದರು ಎಂದರು.
    ನಂತರ ಅವರು ಪಂಚಾಯಿತಿ ಕಚೇರಿ ಎದುರು ನಿರ್ಮಿಸಲಾಗಿದ್ದ ವರುಣಯಂತ್ರ ತೋರಿಸಿದರು. 3 ಬೈ 3 ಆಕಾರದ 4 ಅಡಿ ಎತ್ತರದ ಇಟ್ಟಂಗಿಗಳ ಒಲೆ ಅದಾಗಿತ್ತು. ಅದರಲ್ಲಿ ಕಟ್ಟಿಗೆಗಳನ್ನು ಹಾಕಿ ಬೆಂಕಿ ಹಚ್ಚಿ ಸುಮಾರು ಮೂರು ಗಂಟೆಗಳವರೆಗೆ ಹೋಮದಲ್ಲಿ ಹಾಕಿದಂತೆ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಅಡಿಗೆ ಉಪ್ಪನ್ನು ಹಾಕಿದ್ದೇವೆ. ಒಟ್ಟು 6 ಕೆ.ಜಿ.ಯಷ್ಟು  ಉಪ್ಪು ಬೆಂಕಿಯಲ್ಲಿ ಸುರಿಯಲಾಯಿತು ಎಂದು ಅವರು ತಿಳಿಸಿದರು. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಜೆವಳಿಯ ವಿಜ್ಞಾನ ಶಿಕ್ಷಕ ಆರ್.ವಿ.ಪಾಟೀಲ ಅವರನ್ನು ಸಂಪರ್ಕಿಸಲು ಹೇಳಿದರು. ಆದ್ದರಿಂದ ಲೋಹಾರಾ ತಾಲ್ಲೂಕಿನಲ್ಲಿನ ಜೇವಳಿಗೆ ಹೋಗಿ ಅವರಿಗೆ ಭೇಟಿಯಾದೆವು. ಉಪ್ಪನ್ನು ಬೆಂಕಿಯಲ್ಲಿ ಹಾಕುವುದರಿಂದ ಅದರಲ್ಲಿನ ಸೋಡಿಯಂ ಕ್ಲೋರಾಯಿಡ್ ಅಂಶ ಮೋಡಗಳಲ್ಲಿ ಹೋಗಿ ಕಾರಕದಂತೆ ಕಾರ್ಯನಿರ್ವಹಿಸುವುದೇ ಮಳೆ ಸುರಿಯಲು ಕಾರಣ ಎಂದು ಅವರು ವಿವರಿಸಿದರು. ವಿಮಾನದ ಮೂಲಕವೂ ಈ ಕಾರ್ಯ ಕೈಗೊಳ್ಳಬಹುದು. ಆದರೆ ಅದು ಇದರಷ್ಟು ಸರಳ  ಮತ್ತು ಸುಲಭ ಅಲ್ಲ ಎಂದರು. 
    ಈ ಪ್ರಯೋಗಕ್ಕೆ ಬೆಳಿಗ್ಗೆ ಮತ್ತು ಸಂಜೆ ಸಮಯ ಉತ್ತಮ. ಗಾಳಿ ಜೋರಾಗಿರದೆ ಹೊಗೆ ನೇರವಾಗಿ ಮೋಡಗಳ ಕಡೆಗೆ ಹೋಗಬೇಕು. ಹೊಗೆ ವೇಗವಾಗಿ ಮೋಡ ತಲುಪಲು ಒಲೆಯ ಕೆಳಭಾಗದಲ್ಲಿ ರಂಧ್ರ ಮಾಡಿ ಪಂಪಿನಿಂದ ಗಾಳಿ ಹಾಕಿದರೂ ನಡೆಯುತ್ತದೆ. ಮುಖ್ಯವೆಂದರೆ ವಾತಾವರಣದಲ್ಲಿ ಶೇ 50 ರಷ್ಟು ಆದ್ರ್ರತೆ ಇರಬೇಕಾದದ್ದು ಅನಿವಾರ್ಯ. ಈ ರೀತಿ ಅನುಕೂಲ ವಾತಾವರಣವಿದ್ದರೆ 2 ಗಂಟೆಯಿಂದ 72 ಗಂಟೆಗಳ ಒಳಗಾಗಿ ಮಳೆ ಬರುವುದು ನಿಶ್ಚಿತ ಎಂದು ಭರವಸೆ ವ್ಯಕ್ತಪಡಿಸಿದರು. ಉಪ್ಪನ್ನು ದಹಿಸಲು ಇಟ್ಟಿಗೆಗಳ ಒಲೆಯೇ ಬೇಕೆಂದೆನಿಲ್ಲ. ಖಾಲಿ ಡ್ರಮನ್ನು ಸಹ ಬಳಸಬಹುದು ಎಂದು ಅವರು ಹೇಳಿದರು. ಬಸವಕಲ್ಯಾಣದಲ್ಲಿಯೂ ಈ ರೀತಿಯ ಪ್ರಯೋಗ ಮಾಡೋಣ ಎಂಬ ವಿಚಾರವಿತ್ತು. ಆದರೆ ಅಲ್ಲಿಂದ ಬಂದ ನಂತರ ಮರುದಿನದಿಂದ ಎರಡು ದಿನಕ್ಕೊಮ್ಮೆ ಇಲ್ಲಿ ಮಳೆ ಬರುತ್ತಿದೆ.
    ಏನಿದ್ದರೂ ಈ ಪ್ರಯೋಗ ನಿರ್ಲಕ್ಷಿಸುವಂತಿಲ್ಲ. ಸರ್ಕಾರ ಈ ಬಗ್ಗೆ ತಜ್ಞರಿಂದ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬೇಕು. ಹಾಗೆ ನೋಡಿದರೆ ಇದನ್ನು ಸರ್ಕಾರವೇ ಮಾಡಬೇಕು ಎಂದೇನಿಲ್ಲ. ಗ್ರಾಮಸ್ಥರು ಸಹ ಈ ಪ್ರಯೋಗ ನಡೆಸಬಹುದು. ಆದರೆ ಅದಕ್ಕೆ ಮೊದಲು ಸತ್ಯಾಸತ್ಯತೆಯನ್ನು ಕಂಡು ಹಿಡಿಯಲು ಸರ್ಕಾರ ನೇತೃತ್ವ ವಹಿಸುವುದು ಒಳಿತು.

ಕಾಮೆಂಟ್‌ಗಳಿಲ್ಲ: